ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಏಳು ಮಂದಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ನಗರದ ಪೊಲೀಸರು ನಿರ್ಧರಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆಯಾಗಿ ಸುಮಾರು 6 ತಿಂಗಳ ಬಳಿಕ ನಟ ದರ್ಶನ್, ಪವಿತ್ರಾ ಗೌಡ, ನಾಗರಾಜ್, ಲಕ್ಷ್ಮಣ್ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಶುಕ್ರವಾರ (ಡಿ.15) ಜಾಮೀನು ಮಂಜೂರಾಗಿತ್ತು. ಇದರಂತೆ ಸೋಮವಾರ ನ್ಯಾಯಾಲಯಕ್ಕೆ ಜಾಮೀನು ಶ್ಯೂರಿಟಿ ಒದಗಿಸಿದ್ದ ಪವಿತ್ರಾ ಗೌಡ, ಪ್ರದೂಷ್, ನಾಗರಾಜ್ ಇನ್ನಿತರರು ಜೈಲಿನಿಂದ ಮಂಗಳವಾರ (ಇಂದು) ಬಿಡುಗಡೆಯಾಗಿದ್ದಾರೆ.
ಸದ್ಯ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಹೋಗಲು ತೀರ್ಮಾನಿಸಿರುವ ನಗರ ಪೊಲೀಸರು, ಈ ಕುರಿತಂತೆ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪೂರ್ವಾನುಮತಿ ದೊರೆತ ಬಳಿಕ ಸುಪ್ರೀಂನಲ್ಲಿ ಪ್ರಶ್ನಿಸುವುದಾಗಿ ಆಯುಕ್ತ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.
ಪ್ರಕರಣ ಹಿನ್ನೆಲೆ:ಜೂನ್ 9 ರಂದು ಬೆಂಗಳೂರಿನ ಕಾಮಾಕ್ಷಿಪಾಳ್ಯಯ ವ್ಯಾಪ್ತಿಯ ಅನುಗ್ರಹ ಅಪಾರ್ಟ್ಮೆಂಟ್ ಬಳಿಯ ಮೋರಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಅಪಾರ್ಟ್ಮೆಂಟ್ನ ಸೆಕ್ಯೂರಿಟಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಿದಾಗ ಇದು ಮೇಲ್ನೋಟಕ್ಕೆ ಕೊಲೆ ಅನ್ನೋದು ತಿಳಿದಿತ್ತು.
ಜೂನ್ 10 ರಂದು ಆರೋಪಿಗಳಾದ ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯ್ಕ್, ಕೇಶವಮೂರ್ತಿ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರಿಗೆ ಶರಣಾಗಿದ್ದರು. ಫೈನಾನ್ಸ್ ಹಣದ ವಿಚಾರವಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾಗಿ ತಿಳಿಸಿದ್ದರು. ಇವರ ತೀವ್ರ ವಿಚಾರಣೆ ಬಳಿಕ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳನ್ನು ಬಂಧಿಸಲಾಗಿತ್ತು. ಆಗ ಪ್ರಕರಣದ ಆರೋಪಿಗಳಾದ ನಟ ದರ್ಶನ್, ನಟಿ ಪವಿತ್ರಗೌಡ ಸೇರಿದಂತೆ ಒಟ್ಟು 17 ಜನ ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಿದ್ದರು. ಬಳಿಕ ಇವರನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಆರಂಭದಲ್ಲಿ ಎಲ್ಲಾ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿತ್ತು.
ದರ್ಶನ್ ಫೋಟೋ ವೈರಲ್ ಬಳಿಕ ಬಳ್ಳಾರಿ ಜೈಲಿಗೆ ಶಿಫ್ಟ್;ಸೆಪ್ಟಂಬರ್ ತಿಂಗಳಲ್ಲಿ ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ಗೆ ವಿಶೇಷ ಸೌಲಭ್ಯ ಕಲ್ಪಿಸಿದ್ದಾರೆ ಎನ್ನಲಾದ ಫೋಟೋವೊಂದು ವೈರಲ್ ಆಗಿತ್ತು. ಈ ಸಂಬಂಧ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರನ್ನ ನೇಮಿಸಲಾಗಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, ಕೊಲೆ ಪ್ರಕರಣದ ಆರೋಪಿಯಾಗಿರುವ ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಸಜಾ ಬಂಧಿಗಳ ಜೊತೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕಲ್ಪಿಸಿದ ಸಂಬಂಧ ಜೈಲಿನ ಅಧೀಕ್ಷಕ, ಸೂಪರಿಂಡೆಂಟ್ ಸೇರಿ 9 ಮಂದಿ ಜೈಲು ಸಿಬ್ಬಂದಿಯನ್ನ ಸಸ್ಪೆಂಡ್ ಮಾಡಲಾಗಿತ್ತು. ಅಲ್ಲದೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನ ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗಿತ್ತು. ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ನ್ಯಾಯಾಲಯಕ್ಕೆ ಮನವಿ ಮಾಡಿ 6 ವಾರಗಳ ಮಧ್ಯಂತರ ಜಾಮೀನು ಸಹ ಪಡೆದಿದ್ದರು. ಕಳೆದ ವಾರ ಎಲ್ಲಾ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು.
ಇದನ್ನೂ ಓದಿ:ಬೆಂಗಳೂರು: ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಷರತ್ತು ಪೂರೈಸಿದ ದರ್ಶನ್