ಬೆಂಗಳೂರು: ಗೌರಿ- ಗಣೇಶ ಹಬ್ಬಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಈ ನಡುವೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಕೂರಿಸುವ ಉಮೇದಿನಲ್ಲಿ ಅನೇಕ ಆಯೋಜನರು, ಸಂಘಟನೆ, ಮಂಡಳಿ, ಸಮಿತಿಗಳಿವೆ. ಗಣೇಶ ಪ್ರತಿಷ್ಠಾಪನೆ ಮತ್ತು ನಿಮಜ್ಜನ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಮತ್ತು ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದಾಗಿ ಬೆಂಗಳೂರು ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಕೆಲವು ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ. ಬೆಂಗಳೂರಿನ ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಮತ್ತು ನಿಮಜ್ಜನ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು, ಸಮಿತಿಯವರು ಹಾಗೂ ಆಯೋಜಕರು ಈ ನಿಬಂಧನೆಗಳನ್ನ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.
ಪ್ರತಿಷ್ಠಾಪನೆ ನಿಬಂಧನೆಗಳು:
- ಸಾರ್ವಜನಿಕ ಸ್ಥಳದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಮೊದಲಿಗೆ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯುವುದು ಅವಶ್ಯವಾಗಿದೆ. ಮೂರ್ತಿ ಪ್ರತಿಷ್ಠಾಪನೆಯಿಂದ ಸಾರ್ವಜನಿಕರು, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಸಾರ್ವಜನಿಕರು ಹಾಗೂ ವಾಹನ ಸಂಚಾರ ದಟ್ಟಣೆಯಿರುವ ರಸ್ತೆಗಳಲ್ಲಿ ಪ್ರತಿಷ್ಠಾಪನೆಗೆ ಅವಕಾಶವಿರುವುದಿಲ್ಲ.
- ಗಣೇಶ ವಿಗ್ರಹ ಪ್ರತಿಷ್ಠಾಪನೆ ಹಾಗೂ ಇತರೆ ಕಾರ್ಯಕ್ರಮಗಳ ಆಯೋಜನೆಗಾಗಿ ಬಲವಂತವಾಗಿ ಹಾಗೂ ಕಾನೂನು ಬಾಹಿರವಾಗಿ ವಂತಿಗೆಯನ್ನು ಸಂಗ್ರಹಿಸುವವರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
- ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಾರ್ವಜನಿಕ ಸ್ಥಳದಲ್ಲಿ ಚಪ್ಪರ, ಶಾಮಿಯಾನಗಳನ್ನು ಬಂದೋಬಸ್ತಾಗಿ ನಿರ್ಮಿಸಬೇಕು. ಈ ಬಗ್ಗೆ ಬಿಬಿಎಂಪಿಯಿಂದ ಪರವಾನಗಿ ಪಡೆಯುವುದು ಅವಶ್ಯವಾಗಿದೆ.
- ಯಾವುದೇ ಕಾರಣಕ್ಕೂ ವಿವಾದಿತ ಸ್ಥಳದಲ್ಲಿ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಿಸಬಾರದು. ಪ್ರತಿಷ್ಠಾಪನೆ ಮಾಡುವ ಸ್ಥಳದ ಮಾಲೀಕರ ಅನುಮತಿ ಪಡೆದು, ಈ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡಬೇಕು.
- ನ್ಯಾಯಾಲಯದ ನಿರ್ದೇಶನದ ಅನ್ವಯ ಪ್ಲೆಕ್ಸ್ ಮತ್ತು ಬೋರ್ಡ್ಗಳನ್ನು ಅಳವಡಿಸಲು ಅವಕಾಶವಿರುವುದಿಲ್ಲ. ಆದ್ದರಿಂದ ಫ್ಲೆಕ್ಸ್, ಬೋರ್ಡ್ ಹಾಗೂ ಬ್ಯಾನರ್‌ಗಳ ಸಂಬಂಧ ಬಿಬಿಎಂಪಿಯಿಂದ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
- ಗಣೇಶ ವಿಗ್ರಹಗಳ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
- ಗಣೇಶ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ಯಾವುದೇ ಆಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ದಿನದ 24 ಗಂಟೆಗಳ ಕಾಲ ಇಬ್ಬರು ಜವಾಬ್ದಾರಿಯುತ ಕಾರ್ಯಕರ್ತರು ಇರುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು.
- ಆಯೋಜಕರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಆಳವಡಿಸಬೇಕು. ಗಣೇಶ ಮೂರ್ತಿಗಳ ಪ್ರತಿಷ್ಠಾಪನ ಸ್ಥಳಗಳಲ್ಲಿ ಸ್ಥಳೀಯ ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ದಳದ ದೂರವಾಣಿ ಸಂಖ್ಯೆ, ಪದಾಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿರಬೇಕು.
- ಅಲ್ಲದೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಬೆಂಕಿ ನಂದಿಸುವ ಸಾಮಗ್ರಿಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ.
- ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಹಾಗೂ ಸುತ್ತಮುತ್ತ ಅಡುಗೆ ಕಟ್ಟಿಗೆ, ಉರುವಲು, ಸೀಮೆ ಎಣ್ಣೆ ಸಾಧನಗಳನ್ನು ಇಡುವಂತಿಲ್ಲ. ಅಡುಗೆ ಮಾಡುವಂತಿಲ್ಲ.
- ವಿದ್ಯುತ್ ಮತ್ತು ಅಲಂಕಾರದ ವೈರಿಂಗ್ ಬಗ್ಗೆ ಬೆಸ್ಕಾಂ ಇಲಾಖೆಯಿಂದ ಅನುಮತಿ ಪಡೆಯುವುದು ಅವಶ್ಯವಾಗಿದ್ದು, ಅಗ್ನಿಶಾಮಕ ದಳ ಹಾಗೂ ಸಂಚಾರ ಪೊಲೀಸರಿಂದ ನಿರಪೇಕ್ಷಣಾ ಪತ್ರ ಪಡೆಯಬೇಕು.
- ಗಣೇಶ ಮೂರ್ತಿಯ ಪ್ರತಿಷ್ಠಾಪನಾ ಸ್ಥಳದಲ್ಲಿ ದಿನದ 24 ಗಂಟೆ ಸಮರ್ಪಕ ಬೆಳಕು ಇರುವಂತೆ ನೋಡಿಕೊಳ್ಳಬೇಕು.
- ಗಣೇಶ ಪ್ರತಿಷ್ಠಾಪನ ಸ್ಥಳಕ್ಕೆ ಸಾರ್ವಜನಿಕರಿಗೋಸ್ಕರ ಸಮರ್ಪಕವಾದ ಆಗಮನ ಮತ್ತು ನಿರ್ಗಮನದ ವ್ಯವಸ್ಥೆಯನ್ನು ಮಾಡಬೇಕು.
- ಜೊತೆಗೆ ಜನಸಂದಣಿಯನ್ನು ನಿಯಂತ್ರಿಸುವ ಬಗ್ಗೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ, ಸ್ವಯಂ ಸೇವಕರನ್ನು ನೇಮಿಸಿಕೊಂಡು ಯಾವುದೇ ಜನಜಂಗುಳಿಗೆ ಆಸ್ಪದ ನೀಡದಂತೆ ನೋಡಿಕೊಳ್ಳಬೇಕು.
- ಗಣೇಶ ವಿಗ್ರಹ ಪ್ರತಿಷ್ಠಾಪನೆಯ ಎಲ್ಲಾ ಪರಿಕರಗಳ ರಕ್ಷಣೆಗಾಗಿ ಸದರಿ ಕಾರ್ಯಕ್ರಮಗಳನ್ನು ಆಯೋಜಿಸುವವರೇ ಜವಬ್ದಾರಿರಾಗಿರುತ್ತಾರೆ.
- ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಯಾವುದೇ ರೀತಿಯ ಅಪರಾಧಗಳು ನಡೆಯದಂತೆ ಗಮನಹರಿಸಬೇಕು. ಮೆರವಣಿಗೆ ಸಮಯದಲ್ಲಿ ಯಾವುದೇ ಅಪರಾಧಗಳು ನಡೆದರೆ ಆಯೋಜಕರೆ ಜವಬ್ದಾರರಾಗಿರುತ್ತಾರೆ.
- ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮನರಂಜನಾ ಕಾರ್ಯಕ್ರಮ, ಮೆರವಣಿಗೆ ಮತ್ತು ವಿಸರ್ಜನಾ ಸ್ಥಳಗಳಲ್ಲಿ ಹೆಣ್ಣುಮಕ್ಕಳನ್ನು ಚುಡಾಯಿಸುವುದು ಹಾಗೂ ಕೀಟಲೆ ಮಾಡದಂತೆ ಆಯೋಜಕರೆ ಪೂರ್ಣ ಜವಬ್ದಾರಿಯನ್ನು ವಹಿಸಬೇಕು.
- ಹಿರಿಯ ನಾಗಕರಿಕರು, ಶಾಲಾ ಮಕ್ಕಳಿಗೆ ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಮಾತ್ರ ಬಳಸಿಕೊಳ್ಳಲು ಸ್ಥಳೀಯ ಪೊಲೀಸರ ಅನುಮತಿ ಪಡೆದುಕೊಳ್ಳತಕ್ಕದ್ದು. ಧ್ವನಿವರ್ಧಕಗಳ ಶಬ್ದದ ಪ್ರಮಾಣವನ್ನು ಕಡಿಮೆ ಮಟ್ಟದಲ್ಲಿದ್ದು, ಡಿಜೆ ಸೌಂಡ್ ಸಿಸ್ಟಂ ಅಳವಡಿಸಲು ಅವಕಾಶವಿಲ್ಲ.
- ಗಣೇಶ ಮೂರ್ತಿ ಪ್ರತಿಷ್ಠಾಪನ ಮಂಡಳಿಯ ಸಂಘಟಕರು ತಮ್ಮ ಮಂಡಳಿಯ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಇತರ ಪದಾಧಿಕಾರಿಗಳ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನ ಸಂಬಂಧಪಟ್ಟ ಠಾಣಾಧಿಕಾರಿಗಳಿಗೆ ಒದಗಿಸಬೇಕು.