ಬೆಂಗಳೂರು: ಪಂಚೆ ಧರಿಸಿ ಬಂದ ರೈತನಿಗೆ ಪ್ರವೇಶ ನಿರಾಕರಣೆ ವಿಚಾರವಾಗಿ ಬಿಬಿಎಂಪಿ ಸೂಚನೆ ಮೇರೆಗೆ ಜಿಟಿ ಮಾಲ್ ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ.
ಪಂಚೆ ಧರಿಸಿದ್ದಾರೆ ಬಂದಿದ್ದಾರೆ ಎಂದು ಬುಧವಾರ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್‌ನ ಒಳಗೆ ಪ್ರವೇಶಿಸಲು ಹಾವೇರಿ ಮೂಲದ ರೈತರೊಬ್ಬರಿಗೆ ಬಿಟ್ಟಿರಲಿಲ್ಲ. ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದೀಗ ಬಿಬಿಎಂಪಿ ಸೂಚನೆಯಂತೆ ಜಿಟಿ ಮಾಲ್‌ನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿದೆ.
ಜಿಟಿ ಮಾಲ್‌ನ ಮಾಲೀಕ ಆನಂದ್ ಪುತ್ರ ಪ್ರಶಾಂತ್ ಮಾತನಾಡಿ, ''ಆಗಬಾರದ ಘಟನೆ ನಡೆದಿದೆ. ಹೊಸ ಸಿಬ್ಬಂದಿಯಿಂದ ತಪ್ಪಾಗಿದೆ. ಮಾಲ್ ಮಾಲೀಕನಾಗಿ ನಾನು ಈ ಘಟನೆಗೆ ಕ್ಷಮೆ ಕೇಳುತ್ತಿದ್ದೇನೆ. ತಪ್ಪು ಮಾಡಿದ ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿದ್ದೇವೆ. ಈ ರೀತಿಯ ಕೆಲಸ ಆಗಬಾರದಿತ್ತು. ನಮ್ಮ ತಂದೆಯವರು ಕೂಡ ಮಾತಾಡಿ ಕ್ಷಮೆ ಕೇಳಿದ್ದಾರೆ'' ಎಂದಿದ್ದಾರೆ.
''ಬಿಬಿಎಂಪಿಯಿಂದ ನೋಟಿಸ್ ಬಂದಿದೆ. ಘಟನೆ ಬಗ್ಗೆ ಮಾಹಿತಿ ಕೊಡಿ ಎಂದು ನೋಟಿಸ್ ಕೊಟ್ಟಿದ್ದಾರೆ. 1 ಕೋಟಿ 70 ಲಕ್ಷ ರೂಪಾಯಿ ಒಂದು ವರ್ಷದ ತೆರಿಗೆ ಬಾಕಿ ಇದೆ. ಆದರೆ ಪಾಲಿಕೆ ಘಟನೆ ಬಗ್ಗೆ ಮಾಹಿತಿ ಕೊಡಿ ಎಂದು ನೋಟಿಸ್ ಕೊಟ್ಟಿದೆ. ಅದರಂತೆ ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದೇವೆ. ಮುಂದಿನ ಸೂಚನೆ ಬರುವ ತನಕ ಮಾಲ್ ಬಂದ್ ಮಾಡುತ್ತೇವೆ. ಆಗಿರುವ ತಪ್ಪಿನ ಬಗ್ಗೆ ಕ್ಷಮೆ ಯಾಚಿಸುತ್ತೇವೆ. ಘಟನೆ ಕುರಿತು ಮಾಹಿತಿ ಕೊಟ್ಟಿದ್ದೇವೆ. ಫಕೀರಪ್ಪ ಅವರನ್ನು ವೈಯಕ್ತಿವಾಗಿ ಕ್ಷಮೆ ಕೇಳುತ್ತೇವೆ. ಎರಡು ಮೂರು ದಿನ ನಮಗೆ ಕಾಲಾವಕಾಶ ಬೇಕಾಗಿದೆ'' ಎಂದು ಹೇಳಿದ್ದಾರೆ.
''ಕಂದಾಯ ವಿಭಾಗ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಬಗ್ಗೆ ನೋಟಿಸ್ ಕೊಟ್ಟಿದೆ. ಆರೋಗ್ಯ ಇಲಾಖೆ ನೋಟಿಸ್ ಕೊಟ್ಟಿದೆ. ನಮ್ಮ ಮೇಲೆ ಯಾವುದೇ ರಾಜಕೀಯ ಒತ್ತಡ ಇಲ್ಲ. ನಮ್ಮ ಕಡೆಯಿಂದ ತಪ್ಪಾಗಿದೆ. ಅದಕ್ಕಾಗಿ ನಾವೇ ಬಂದ್ ಮಾಡುತ್ತಿದ್ದೇವೆ. ಏಳು ದಿನ ಎಂದು ಸದನದಲ್ಲಿ ಹೇಳಿದ್ದಾರೆ. ಎಷ್ಟು ದಿನ ಆಗುವುದು ಎಂದು ತಿಳಿದಿಲ್ಲ'' ಎಂದಿದ್ದಾರೆ.
ಇದನ್ನೂ ಓದಿ:ರೈತನನ್ನು ಅವಮಾನಿಸಿದ ಜಿ.ಟಿ.ಮಾಲ್ ಒಂದು ವಾರ ಮುಚ್ಚಿಸಲು ಕ್ರಮ: ಸಚಿವ ಭೈರತಿ ಸುರೇಶ್ - Govt Takes Action Against G T Mall