ಬೆಂಗಳೂರು: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧದ ಅಪಪ್ರಚಾರ ಆರೋಪ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ಗೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದ್ದು, ಖುದ್ದು ಹಾಜರಾಗುವಂತೆ ಸೂಚಿಸಿದೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಪಪ್ರಚಾರ ಮಾಡಿದ್ದಾರೆಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಖಾಸಗಿ ದೂರು ನೀಡಿತ್ತು. ದೂರಿನ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಮಾರ್ಚ್ 28ಕ್ಕೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದೆ.
ಚುನಾವಣಾ ಸಂದರ್ಭದಲ್ಲಿ ಅಂದಿನ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು 40% ಕಮಿಷನ್ ಮತ್ತಿತರ ಆರೋಪಗಳನ್ನು ಮಾಡಿದ್ದರು. ಅಲ್ಲದೇ ಭ್ರಷ್ಟಾಚಾರದ ಆರೋಪದ ಜಾಹೀರಾತು ನೀಡಿದ್ದರು. ಇದರಿಂದಾಗಿ ಬಿಜೆಪಿಗೆ ಹಾನಿಯಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಬಿಜೆಪಿ ಪರ ವಕೀಲ ವಿನೋದ್ ಕುಮಾರ್ ಎನ್ನುವವರು ವಾದ ಮಂಡಿಸಿದ್ದರು.
ವಾದ ಆಲಿಸಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಜೆ. ಪ್ರೀತ್ ಅವರು, ಮಾರ್ಚ್ 28ಕ್ಕೆ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಖುದ್ದು ಹಾಜರಾಗುವಂತೆ ಸಮನ್ಸ್ ನೀಡಿ ಆದೇಶಿಸಿದ್ದಾರೆ.
ಇದನ್ನೂ ಓದಿ:ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ರದ್ದು ಕೋರಿ ಶ್ರೀರಾಮುಲು ಸಲ್ಲಿಸಿದ್ದ ಅರ್ಜಿ ವಜಾ