ಭಾರತ ಕ್ರಿಕೆಟ್ ತಂಡದ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹವಾಗ್ ಅವರ ಪುತ್ರ ಆರ್ಯವೀರ್ ಸೆಹವಾಗ್ ತಮ್ಮ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ. ಕಳೆದ ತಿಂಗಳು ವೃತ್ತಿಪರ ಕ್ರಿಕೆಟ್‌ಗೆ ಕಾಲಿಟ್ಟ 15ರ ಹರೆಯದ ಆರ್ಯವೀರ್, ಕೂಚ್ ಬೆಹಾರ್ ಟ್ರೋಫಿ ಟೂರ್ನಿಯಲ್ಲಿ ದ್ವಿಶತಕ ಸಿಡಿಸಿದ್ದಾರೆ. ದೆಹಲಿ ಪರ ಆಡುತ್ತಿರುವ ಇವರು ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು.
ದೆಹಲಿ ಮತ್ತು ಮೇಘಾಲಯ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಆರ್ಯವೀರ್ 200 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದಾರೆ. 2 ಸಿಕ್ಸರ್ ಮತ್ತು 34 ಬೌಂಡರಿಗಳು ಇವರ ಇನ್ನಿಂಗ್ಸ್‌ನಲ್ಲಿದ್ದವು. ಸದ್ಯ ಅಜೇಯರಾಗಿ ಕ್ರೀಸ್‌ನಲ್ಲಿದ್ದಾರೆ.
ಈ ಇನ್ನಿಂಗ್ಸ್‌ನಲ್ಲಿ ಆರ್ಯವೀರ್ 87ರ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದ್ದಾರೆ. ಆರ್ಯವೀರ್ ಸೆಹವಾಗ್ ಅವರ ಸ್ಫೋಟಕ ಆಟದಿಂದಾಗಿ ಡೆಲ್ಲಿ ತಂಡ ಮೇಘಾಲಯ ವಿರುದ್ಧ 208 ರನ್‌ಗಳ ಮುನ್ನಡೆ ಸಾಧಿಸಿದೆ.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಮೇಘಾಲಯ ಮೊದಲ ಇನ್ನಿಂಗ್ಸ್‌ನಲ್ಲಿ 260 ರನ್‌ಗಳಿಗೆ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ದೆಹಲಿ ಬೃಹತ್ ಮೊತ್ತದತ್ತ ಸಾಗಿತು. ಎರಡನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 468 ರನ್ ಗಳಿಸಿದೆ.
ಆರ್ಯವೀರ್ ಕಳೆದ ತಿಂಗಳು ವಿನೂ ಮಂಕಡ್ ಟ್ರೋಫಿ ಮೂಲಕ ವೃತ್ತಿಪರ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಮಣಿಪುರ ವಿರುದ್ಧದ ಮೊದಲ ಪಂದ್ಯದಲ್ಲಿ 49 ರನ್ ಗಳಿಸಿದ್ದರು. ಇದೀಗ ಕೂಚ್ ಬೆಹಾರ್ ಟ್ರೋಫಿಯಲ್ಲೂ ಅಮೋಘ ಫಾರ್ಮ್ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಬಾರ್ಡರ್-ಗವಾಸ್ಕರ್ ಟ್ರೋಫಿ: ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್, ಒಂದು ವಿಕೆಟ್ ಪತನ