ಬಿಬಿಎಂಪಿಯಿಂದ ಬೃಹತ್ ಮೊತ್ತದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿ ಬಿಡುಗಡೆ - BBMP
ಬೆಂಗಳೂರು ನಗರದ ಪ್ರತಿಷ್ಠಿತ ಸಂಸ್ಥೆಗಳು, ಹೋಟೆಲ್ಗಳು, ಡೆವಲಪರ್ಸ್, ಶಿಕ್ಷಣ ಸಂಸ್ಥೆಗಳು, ಚಾರಿಟಬಲ್ ಟ್ರಸ್ಟ್ಗಳು, ಮಾಲ್‌ಗಳು ಹತ್ತಾರು ವರ್ಷಗಳಿಂದ ಕೋಟ್ಯಂತರ ರೂಪಾಯಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿವೆ.
ಬೆಂಗಳೂರು: ಬಿಬಿಎಂಪಿಯು ಆಸ್ತಿ ತೆರಿಗೆ ವಸೂಲಿಗೆ ಪರದಾಡುತ್ತಿರುವ ಬೆನ್ನಲ್ಲೆ ಬೃಹತ್ ಮೊತ್ತದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ದೊಡ್ಡ ಪಟ್ಟಿಯನ್ನೇ ಬಿಡುಗಡೆ ಮಾಡಿದೆ.
ಪಾಲಿಕೆಗೆ ಆಸ್ತಿ ತೆರಿಗೆ ಆದಾಯದ ಪ್ರಮುಖ ಮೂಲವಾಗಿದೆ. ನಗರದ ಪ್ರತಿಷ್ಠಿತ ಸಂಸ್ಥೆಗಳು, ಹೊಟೇಲ್‌ಗಳು, ಡೆವಲಪರ್ಸ್, ಶಿಕ್ಷಣ ಸಂಸ್ಥೆಗಳು, ಚಾರಿಟಬಲ್ ಟ್ರಸ್ಟ್ಗಳು, ಮಾಲ್‌ಗಳು ಹತ್ತಾರು ವರ್ಷಗಳಿಂದ ಕೋಟ್ಯಂತರ ರೂಪಾಯಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿವೆ. 113.72 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಪಾಲಿಕೆಯು ನಗರದ ಎಂಟು ವಲಯಗಳಲ್ಲಿ ಅತ್ಯಧಿಕ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇವರಿಂದ ತೆರಿಗೆ ವಸೂಲಿ ಮಾಡುವುದೇ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ತೆರಿಗೆ ಕಟ್ಟದ ಕಟ್ಟಡಗಳಿಗೆ ನೋಟಿಸ್ ಜಾರಿ, ಬೀಗಮುದ್ರೆ, ಚರಾಸ್ತಿ, ಸ್ಥಿರಾಸ್ತಿ ಮುಟ್ಟುಗೋಲು, ಮಾಲೀಕರ ಬ್ಯಾಂಕ್ ಖಾತೆ ಜಪ್ತಿಯಂತಹ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ಆಸ್ತಿ ಮಾಲೀಕರು ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.
ಆಸ್ತಿ ತೆರಿಗೆ ಘೋಷಿಸಿಕೊಂಡಿರುವವರಿಗೆ ಒಂದು ಬಾರಿ ತಿರುವಳಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ತೆರಿಗೆ ಪಾವತಿಗೆ ನೀಡುವ ಶೇ 5 ರಷ್ಟು ರಿಯಾಯಿತಿ ಅವಧಿಯನ್ನೂ ವಿಸ್ತರಿಸಲಾಗಿದೆ. ಆದರು ಬಹುತೇಕರು ತೆರಿಗೆ ಕಟ್ಟಲು ಮುಂದಾಗುತ್ತಿಲ್ಲ. ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಗೆ ಪದೇ ಪದೆ ನೋಟಿಸ್ ನೀಡಲಾಗುತ್ತಿದೆ. ಇದಕ್ಕೆ ಸ್ಪಂದಿಸದ ಎಲ್ಲ ಆಸ್ತಿಗಳಿಗೆ ಫಾರಂ 13 ಜಾರಿ ಮಾಡಿ, ಉಪ ನೋಂದಣಾಧಿಕಾರಿ ಕಚೇರಿ ದಾಖಲೆಗಳಲ್ಲಿ ಬಿಬಿಎಂಪಿ ಹೆಸರು ದಾಖಲಿಸುವ ಅಟ್ಯಾಚ್ ಪ್ರಕ್ರಿಯೆ ಆರಂಭಿಸಲಾಗಿದೆ.
ಬಾಕಿ ತೆರಿಗೆ ಮಾಹಿತಿ:ಬೊಮ್ಮನಹಳ್ಳಿ ವಲಯ 3.18 ಕೋಟಿ ರೂಪಾಯಿ, ದಾಸರಹಳ್ಳಿ ವಲಯ 25.10 ಕೋಟಿ ರೂಪಾಯಿ, ಪೂರ್ವ ವಲಯ 8.54 ಕೋಟಿ ರೂಪಾಯಿ, ರಾಜರಾಜೇಶ್ವರಿನಗರ ವಲಯ 8.59 ಕೋಟಿ ರೂಪಾಯಿ, ದಕ್ಷಿಣ ವಲಯ 12.55 ಕೋಟಿ ರೂಪಾಯಿ, ಯಲಹಂಕ ವಲಯ 9.14 ಕೋಟಿ ರೂಪಾಯಿ, ಮಹದೇವಪುರ ವಲಯ 8.98 ಕೋಟಿ ರೂಪಾಯಿ, ಪಶ್ಚಿಮ ವಲಯ 37.62 ಕೋಟಿ ರೂಪಾಯಿ ಸೇರಿದಂತೆ ಒಟ್ಟು 113.72 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿವೆ.