ಬೆಂಗಳೂರು:ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದ ದ್ವಿಚಕ್ರವಾಹನ ಜಖಂಗೊಂಡಿರುವುದನ್ನು ಮರೆಮಾಚಲು ಅಪಹರಣದ ಕತೆ ಕಟ್ಟಿದ ಎಎಸ್ಐ ಪುತ್ರನ ಅಸಲಿ ಬಣ್ಣವನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಯಲಿಗೆಳೆದಿದ್ದಾರೆ.
ಉಲ್ಲಾಳ ಬಸವೇಶ್ವರ ಲೇಔಟ್ನ ನಿವಾಸಿ ಗೌತಮ್ ಸುಭಾಷ್ (22) ಅಪಹರಣ ಕತೆ ಕಟ್ಟಿ ಪೊಲೀಸರ ಬಲೆಗೆ ಸಿಕ್ಕಿಬಿದ್ದವ.
ಮೇ 20ರಂದು ಕೆಂಗೇರಿ ಬಳಿ ನನ್ನ ಸ್ನೇಹಿತರನ್ನು ಭೇಟಿ ಮಾಡಿ ಕೆಂಗೇರಿಯಿಂದ ಬೈಕ್ನಲ್ಲಿ ಹೊರಟು ರಾತ್ರಿ ಸುಮಾರು 9.30ಕ್ಕೆ ಪಬ್ ಹೌಸ್ ಹತ್ತಿರದ ರಸ್ತೆಯಲ್ಲಿ ಬರುತ್ತಿದ್ದನು. ಆ ವೇಳೆ, ಮೂರು ದ್ವಿಚಕ್ರ ವಾಹನಗಳಲ್ಲಿ 6 ಜನ ಅಪರಿಚಿತರು ಬಂದು ನೀನು ಎಎಸ್ಐ ಸುರೇಶ್ ಮಗನಾ ಎಂದು ಕೇಳಿದರು. ಅದಕ್ಕೆ ತಾನು ಹೌದು ಎಂದು ಹೇಳಿದಾಗ ಅವರು ತನ್ನ ತಂದೆ ಕಾಮಾಕ್ಷಿಪಾಳ್ಯ ಟ್ರಾಫಿಕ್ ಸ್ಟೇಷನ್ನಲ್ಲಿ ಡ್ಯೂಟಿ ಮಾಡುತ್ತಿದ್ದಾಗ ನಮಗೆ ತುಂಬಾ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಿ ಅವರೇ ನನ್ನ ಬೈಕ್ ಚಾಲನೆ ಮಾಡಿಕೊಂಡು ಬಲವಂತದಿಂದ ಹತ್ತಿರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದರು.
ನಂತರ ಚಾಕುವಿನಿಂದ ಎಡಗೈ, ಎಡ ಭುಜ ಮತ್ತು ಮೊಣಕೈ ಹತ್ತಿರ ತಿವಿದು ರಕ್ತಗಾಯ ಮಾಡಿ, ಕಾಲುಗಳಿಂದ ಒದ್ದು ಹಲ್ಲೆ ಮಾಡಿ ನಿನ್ನ ತಂಗಿ ಎಲ್ಲಿ ಕಾಲೇಜಿಗೆ ಹೋಗುತ್ತಾಳೆ ಎಂದು ನಮಗೆ ಗೊತ್ತು. ನಿನ್ನ ತಂಗಿಯನ್ನು ರೇಪ್ ಮಾಡುತ್ತೇವೆ. ನಿನ್ನ ತಂದೆ ತಾಯಿಯನ್ನು ಸಾಯಿಸುತ್ತೇವೆಂದು ಹೇಳಿ ಬೆದರಿಕೆಯನ್ನು ಹಾಕಿದ್ದಾರೆ ಎಂದು ಆರೋಪಿಸಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ಗೌತಮ್ ಸುಭಾಷ್ ದೂರು ನೀಡಿದ್ದ.
ತಂದೆ ಬೈಯ್ಯುತ್ತಾರೆಂದು ಕತೆ ಹೆಣೆದ ಪೊಲೀಸ್ ಮಗ:ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ತನಿಖಾ ಕಾಲದಲ್ಲಿ ಕೃತ್ಯ ನಡೆದ ಸ್ಥಳದ ಸುತ್ತಮುತ್ತ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದರು. ಆ ವೇಳೆ ಗೌತಮ್ ಸುಭಾಷ್ ದೂರಿನಲ್ಲಿ ತಿಳಿಸಿರುವಂತೆ ಘಟನೆ ನಡೆದಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಹೀಗಾಗಿ ಈ ಬಗ್ಗೆ ಸಂದೇಹ ಬಂದಿದ್ದರಿಂದ ಗೌತಮ್ ಸುಭಾಷ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದರು.