ಬೆಳಗಾವಿ: ಇಬ್ಬರು ಸಹೋದರರ ಮೇಲೆ 12 ಜನರು ಇರುವ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಡೆದಿದೆ. ಘಟನೆಯಿಂದ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕಿತ್ತೂರಿನ ಗುರುವಾರ ಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆ ಬಳಿ ಇರುವ ಡೈಮಂಡ್ ಚಿಕನ್ ಸೆಂಟರ್ ನಡೆಸುವ ಮುಜಮ್ಮಿಲ್ ಇನ್ನಾ ಜಮಾದಾರ್(33), ತೌಸೀಫ್ ಇನ್ನಾ ಜಮಾದಾರ್ (36) ಹಲ್ಲೆಗೊಳಗಾದವರು. ಮುಜಮ್ಮಿಲ್ ಸ್ಥಿತಿ ಗಂಭೀರವಾಗಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನೇಸರಗಿಯ ಯಲ್ಲಪ್ಪ ಲಕ್ಕುಂಡಿ, ವಿನೋದ ಸೇರಿ 12 ಜನರ ತಂಡವು ಹಲ್ಲೆ ಮಾಡಿದೆ. ಹಣಕಾಸಿನ ವ್ಯವಹಾರವೇ ಈ ಘಟನೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಕ್ರೂಸರ್ ವಾಹನದಲ್ಲಿ ಸುಮಾರು ಹತ್ತು, ಹನ್ನೆರಡು ಜನರ ಗುಂಪು ಇಂದು ಬೆಳಗ್ಗೆ ಚಿಕನ್ ಅಂಗಡಿಗೆ ಏಕಾಏಕಿ ನುಗ್ಗಿ, ಅಂಗಡಿಯಿಂದ ಒಬ್ಬನನ್ನು ಹೊರಗೆ ಎಳೆದು ತಂದು ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ಇದೇ ವೇಳೆ, ಮತ್ತೊಬ್ಬನ ಮೇಲೆಯೂ ದಾಳಿ ಮಾಡಲಾಗಿದೆ.