ಬೆಳಗಾವಿ:"ಇಲ್ಲಿನ ಸುವರ್ಣಸೌಧದಲ್ಲಿ ಡಿ.9ರಿಂದ 19ರವರೆಗೆ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಯಶಸ್ಸಿಗೆ ಉತ್ತರ ಕರ್ನಾಟಕ ಜೊತೆಗೆ ಇಡೀ ರಾಜ್ಯದ ಜನರ ಆಶೀರ್ವಾದ ಮತ್ತು ಸಹಕಾರ ಅತ್ಯಗತ್ಯ. ಕಲಾಪಗಳು ಸೌಹಾರ್ದಯುತ ಮತ್ತು ಶಾಂತಿಯಿಂದ ನೆರವೇರುವ ವಿಶ್ವಾಸವಿದೆ" ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಈಟಿವಿ ಭಾರತ ಜೊತೆಗೆ ಮಾತನಾಡಿದ ಖಾದರ್, "ಅಧಿವೇಶನ ಯಶಸ್ವಿಯಾಗಿ ನಡೆದು, ಎಲ್ಲರಿಗೂ ಗೌರವ ತರುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿವೇಶನಕ್ಕೆ ಬರುವ ಶಾಸಕರು, ಅಧಿಕಾರಿಗಳಿಗೆ ಊಟ, ವಸತಿ, ಸಾರಿಗೆ ಸೇರಿ ಎಲ್ಲ ರೀತಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಈ ಬಾರಿಯ ಅಧಿವೇಶನಕ್ಕೆ ಒಟ್ಟು 8,500 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ 6,000 ಪೊಲೀಸರು, 2,500 ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ" ಎಂದು ತಿಳಿಸಿದರು.
ಅನುಭವ ಮಂಟಪದ ತೈಲವರ್ಣದ ಚಿತ್ರ ಅನಾವರಣ: "ಸುವರ್ಣಸೌಧದಲ್ಲಿ ನಾಳೆ ಅನಾವರಣವಾಗುತ್ತಿರುವ ಅನುಭವ ಮಂಟಪದ ತೈಲವರ್ಣದ ಚಿತ್ರ ಕೇವಲ ಚಿತ್ರವಲ್ಲ. ಇದಕ್ಕೆ ದೊಡ್ಡ ಇತಿಹಾಸ, ಪರಂಪರೆ ಇದೆ. 12ನೇ ಶತಮಾನದಲ್ಲಿ ಅಂದಿನ ಸಾಮಾಜಿಕ ಕಾಲಘಟ್ಟದಲ್ಲೇ ವಿಶ್ವಗುರು ಬಸವಣ್ಣನವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದರು. ನಮ್ಮ ದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉದ್ದೇಶದಿಂದಾಗಿ ಇಂದಿನ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಸಂದೇಶ ನೀಡಲು ಭಾವಚಿತ್ರ ಅನಾವರಣಗೊಳಿಸಲಾಗುತ್ತಿದೆ" ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾದರ್, ಡಿಸೆಂಬರ್ 9ರಂದು ಮೊದಲ ದಿನ ಬೆಳಗ್ಗೆ 11ರಿಂದ ಅಧಿವೇಶನ ವಿದ್ಯುಕ್ತವಾಗಿ ಆರಂಭವಾಗಲಿದೆ. ಇದಕ್ಕೂ ಮೊದಲು 10.30ಕ್ಕೆ ಐತಿಹಾಸಿಕ ಅನುಭವ ಮಂಟಪ ಸ್ಮರಣೆಯ ಬೃಹತ್ ತೈಲ ವರ್ಣ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸುವರು. ವಿಧಾನ ಪರಿಷತ್ ಸಭಾಪತಿಗಳು, ಉಪ ಸಭಾಪತಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವು ಗಣ್ಯರು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಹೇಳಿದರು.
ಶಾಸಕರ ಹಾಜರಾತಿ ವಿಚಾರ: ಬೆಳಗಾವಿ ಅಧಿವೇಶನದಲ್ಲಿ ಶಾಸಕರ ಹಾಜರಾತಿ ಕಡಿಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, "ಈ ಭಾಗದ ಜನರ ಭಾವನೆ ಮತ್ತು ಬೇಡಿಕೆಗಳಿಗೆ ಆದ್ಯತೆ ಕೊಡುತ್ತೇವೆ. ಈ ಸಲ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಕಲಾಪದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ವಿಶ್ವಾಸವಿದೆ" ಎಂದರು.
ಅಧಿವೇಶನಕ್ಕೆ ₹25 ಕೋಟಿ ಖರ್ಚು: ಅಧಿವೇಶನಕ್ಕೆ ಅಂದಾಜು 25 ಕೋಟಿ ರೂ. ಖರ್ಚಾಗಲಿದೆ. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ವಿಧಾನಸಭೆ ಸದಸ್ಯರಿಗೆ ಪ್ರಮಾಣವಚನ ಬೋಧನೆ ನಡೆಯಲಿದೆ. ಮಧ್ಯಾಹ್ನ ಬಿಎಸ್‌ಸಿ (ಕಲಾಪ ಸಲಹಾ ಸಮಿತಿ) ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಂದಿನ ಅಧಿವೇಶನದ ರೂಪುರೇಷೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದರು.