ಬೆಂಗಳೂರು/ಬೆಳಗಾವಿ: ಒದ್ದು ಮುಖ್ಯಮಂತ್ರಿ ಕುರ್ಚಿಯನ್ನು ಕಸಿದುಕೊಳ್ಳುವಿರಾ? ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.
ಸಂತಾಪ ಸೂಚನಾ ನಿರ್ಣಯದ ಮೇಲೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡುತ್ತಿದ್ದಾಗ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪುವ ಪರಿಸ್ಥಿತಿ ಇತ್ತು. ಆಗ ಕೃಷ್ಣ ಅವರ ಮನೆಯ ಬಾಗಿಲನ್ನು ಒದ್ದ ಘಟನೆಯನ್ನು ಉಲ್ಲೇಖಿಸಿದರು. ಆಗ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಈ ಮೇಲಿನಂತೆ ಪ್ರಶ್ನೆ ಮಾಡಿದರು.
ಇದಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಮಾತನಾಡಿ, ಅಂದು ನಮ್ಮ ಸರ್ಕಾರ ಬಂದ ನಂತರ ಮಂತ್ರಿ ಮಂಡಲದಲ್ಲಿ ಯಾರೆಲ್ಲಾ ಇರಬೇಕು ಎಂದು ಕೃಷ್ಣ ಅವರ ಸಮ್ಮುಖದಲ್ಲಿ ನಾನೇ ಪಟ್ಟಿ ಬರೆದೆ. ನಂತರ ಹೈಕಮಾಂಡ್ಗೆ ಅದನ್ನು ಸಲ್ಲಿಸಿದೆವು. ಕೊನೆಗೆ ಆ ಪಟ್ಟಿ ರಾಜ್ಯಪಾಲರ ಬಳಿ ಹೋದಾಗ, ನನ್ನ ಹಾಗೂ ಜಯಚಂದ್ರ ಅವರ ಹೆಸರಿರಲಿಲ್ಲ. ಮಾಧ್ಯಮಗಳು ಶಿವಕುಮಾರ್ ರಾಜಕೀಯ ಕಾರ್ಯದರ್ಶಿ ಎಂದು ವರದಿ ಮಾಡಿದ್ದರು. ಆಗ ನನಗೆ ಕರೆ ಬಂತು, ನಾನು ಜ್ಯೋತಿಷಿ ದ್ವಾರಕನಾಥ್ ಅವರಿಗೆ ಕರೆ ಮಾಡಿದೆ. ಆಗ ಅವರು ನಿನಗೆ ಅಧಿಕಾರ ಬೇಕಾದರೆ ಅದನ್ನು ಕಿತ್ತುಕೊಳ್ಳಬೇಕು ಎಂದರು. ಕೃಷ್ಣ ಅವರ ಮನೆಗೆ ಹೋಗಿ ಬಾಗಿಲು ಒದ್ದಿದ್ದೆ. ಜಯಚಂದ್ರ ಗಢಗಢ ನಡುಗಿದ್ದರು. ಮಲಗಿದ್ದ ಕೃಷ್ಣ ಎದ್ದು ಬಂದಿದ್ದರು. ಆಗ ಅವರಿಗೆ ಹೇಳಿದೆ. ಸಾಹೇಬರೇ, ನಿಮ್ಮ ಜೊತೆ ಯಾರೂ ಇಲ್ಲದಾಗ ನಿಂತಿದ್ದೇವೆ. ನಿಮ್ಮನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ದೇವೆ, ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ, ಮುಖ್ಯಮಂತ್ರಿ ಮಾಡಿದ್ದೇವೆ. ನಾನಿಲ್ಲದೆ ಸರ್ಕಾರ ಇಲ್ಲ ಮತ್ತು ನಾನಿಲ್ಲದೆ ನೀವು ಪ್ರಮಾಣವಚನ ಸ್ವೀಕರಿಸುವಂತಿಲ್ಲ ಎಂದು ಹೇಳಿದ್ದೆ. ಪಟ್ಟಿ ಈಗಾಗಲೇ ರಾಜ್ಯಪಾಲರ ಬಳಿ ಹೋಗಿದೆ, ಪ್ರಮಾಣ ವಚನಕ್ಕೆ ತಯಾರಿಯಾಗುತ್ತಿದೆ ಎಂದರು. ಅದೆಲ್ಲ ನನಗೆ ಗೊತ್ತಿಲ್ಲ. ನಾನು ಇರಲೇಬೇಕು ಎಂದೆ. ಏನಿದು ನೀನು ರುದ್ರಾವಾತಾರ ತೋರುತ್ತಿದ್ದೀಯಾ ಅಂತಾ ಕೇಳಿದರು. ಈ ಘಟನೆಗೆ ಜಯಚಂದ್ರ ಅವರೇ ಸಾಕ್ಷಿ ಎಂದು ಡಿಕೆಶಿ ನೆನಪಿಸಿಕೊಂಡರು.
ನಂತರ ಕೃಷ್ಣಾ ಅವರ ಪತ್ನಿ ಕರೆ ಮಾಡಿ ನಾವು ಜೋತಿಷ್ಯರ ಬಳಿ ವಿಚಾರಿಸಿದೆವು. ನಿನಗೆ ಸಮಯ ಸರಿಯಿಲ್ಲ, ಸ್ವಲ್ಪ ತಾಳ್ಮೆಯಿಂದ ಇರುವಂತೆ ತಿಳಿಸಿದರು. ಅವರ ಪುತ್ರಿ ಕೂಡ ನನ್ನ ಜೊತೆ ಮಾತನಾಡಿದರು. ಆಗ ನಾನು ಇಲ್ಲಮ್ಮ, ನಾನು ನನ್ನ ಜ್ಯೋತಿಷ್ಯರ ಬಳಿ ಕೇಳಿದ್ದೇನೆ, ನಾನು ಮಂತ್ರಿಯಾಗದಿದ್ದರೆ ಈ ಸರ್ಕಾರವಿಲ್ಲ ಎಂದು ಹೇಳಿದೆ. ನಂತರ ಬೆಳಗ್ಗೆ 6 ಗಂಟೆಗೆ ರಾಜ್ಯಪಾಲರಿಗೆ ಕರೆ ಮಾಡಿ ಪ್ರಮಾಣವಚನ ಕಾರ್ಯಕ್ರಮ ನಿಲ್ಲಿಸಿ, ಮತ್ತೆ ಹೈಕಮಾಂಡ್ ಬಳಿ ಮಾತುಕತೆ ನಡೆಸಿ ನಾವೆಲ್ಲರೂ ಮಂತ್ರಿಯಾದೆವು ಎಂದು ಡಿ.ಕೆ.ಶಿವಕುಮಾರ್ ಹಿಂದಿನ ಘಟನಾವಳಿಯನ್ನು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಆರ್.ಅಶೋಕ್, ಈಗಲೂ ಅದೇ ಪರಿಸ್ಥಿತಿ ಇದೆ. ಅದೇ ರೀತಿ ಮಾಡುತ್ತೀರಾ? ಎಂದು ಪ್ರಶ್ನಿಸಿದರು. ಮಾತು ಮುಂದುವರೆಸಿದ ಅಶೋಕ್, ನಾನು ಟೀಕೆ ಮಾಡುವುದಿಲ್ಲ. ಎಸ್.ಎಂ.ಕೃಷ್ಣ ಅವರಿಂದ ನಿಮಗೆ ಒಳ್ಳೆಯದಾಗಿದೆ. ಈಗ ಮುಖ್ಯಮಂತ್ರಿ ಸ್ಥಾನವನ್ನು ಒದ್ದು ಕಿತ್ತುಕೊಳ್ಳಬೇಕೆಂದು ಹೇಳುತ್ತೀರಾ? ಎಂದು ಮರು ಪ್ರಶ್ನಿಸಿದರು.