ಕರ್ನಾಟಕ

karnataka

ETV Bharat / state

ರಾಜ್ಯ ಬಜೆಟ್: ಬೆಳಗಾವಿ ಕಬ್ಬು ಬೆಳೆಗಾರರ ಬೇಡಿಕೆಗಳೇನು..? - Belagavi Sugarcane farmers

ಕಾರ್ಖಾನೆಗಳಲ್ಲಿ ತೂಕದಲ್ಲಿ ಆಗುತ್ತಿರುವ ಮೋಸ ತಡೆದು, ಕಬ್ಬಿಗೆ ಸೂಕ್ತ ಬೆಲೆ ಸಿಗುವ ಬಹುಕಾಲದ ಬೇಡಿಕೆ ಈ ಬಾರಿಯ ರಾಜ್ಯ ಬಜೆಟ್​ನಲ್ಲಾದರೂ ಈಡೇರುತ್ತಾ ಎಂದು ಬೆಳೆಗಾರರು ಎದುರು ನೋಡುತ್ತಿದ್ದಾರೆ.

belagavi-sugarcane-farmers-demands-in-state-budget
ರಾಜ್ಯ ಬಜೆಟ್: ಬೆಳಗಾವಿ ಕಬ್ಬು ಬೆಳೆಗಾರರ ಬೇಡಿಕೆಗಳೇನು..?

By ETV Bharat Karnataka Team

Published : Feb 14, 2024, 6:56 AM IST

Updated : Feb 14, 2024, 12:14 PM IST

ರಾಜ್ಯ ಬಜೆಟ್: ಬೆಳಗಾವಿ ಕಬ್ಬು ಬೆಳೆಗಾರರ ಬೇಡಿಕೆಗಳೇನು..?

ಬೆಳಗಾವಿ: ಕಬ್ಬು ಬೆಳಗಾವಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ. ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯುವುದು ಕೂಡ ಇಲ್ಲಿಯೇ. ರೈತರಿಗೆ ದೊಡ್ಡ ಆದಾಯ ತಂದು ಕೊಡಬೇಕಿದ್ದ ಈ ಕಬ್ಬು, ಕಾರ್ಖಾನೆ ಮಾಲೀಕರನ್ನು ಮಾತ್ರ ಕೋಟಿ ವೀರರನ್ನಾಗಿಸುತ್ತಿದೆ. ಕಬ್ಬು ಬೆಳೆಗಾರರ ನಿರೀಕ್ಷೆಗಳನ್ನು ಯಾವುದೇ ಸರ್ಕಾರ ಈಡೇರಿಸಲು ಮುಂದಾಗುತ್ತಿಲ್ಲ. ಹಾಗಾಗಿ, ತೂಕದಲ್ಲಿ ಆಗುತ್ತಿರುವ ಮೋಸ ತಡೆದು, ಪ್ರತಿ ಟನ್ ಕಬ್ಬಿಗೆ ಒಟ್ಟು 6,600 ರೂ. ದರ ನೀಡುವಂತೆ ರೈತ ಹೋರಾಟಗಾರರು ಆಗ್ರಹಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಫೆ.16ರಂದು ಬಜೆಟ್ ಮಂಡಿಸುತ್ತಿದ್ದು, ಈಗಲಾದರೂ ನಮ್ಮ ಬೇಡಿಕೆ ಈಡೇರಿಸುತ್ತಾರಾ ಎಂದು ಆಸೆಗಣ್ಣಿನಿಂದ ಕಬ್ಬು ಬೆಳೆದ ರೈತರು ಕಾಯುತ್ತಾ ಕುಳಿತಿದ್ದಾರೆ. ಪ್ರಸಕ್ತ ವರ್ಷ ಭೀಕರ ಬರಗಾಲವಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ 2 ಲಕ್ಷ ಹೆಕ್ಟೇರ್​​​​​ಗೂ ಅಧಿಕ ಭೂಮಿಯಲ್ಲಿ ಕಬ್ಬು ಬೆಳೆಯಲಾಗಿದೆ. ಮಳೆ ಕೊರತೆ ನಡುವೆಯೂ ಕಷ್ಟಪಟ್ಟು ರೈತರು ಕಬ್ಬು ಬೆಳೆದು ಕಾರ್ಖಾನೆಗೆ ಕಳುಹಿಸಿದ್ದಾರೆ.

ಈ ಬಾರಿಯ ಹಂಗಾಮು ಮುಕ್ತಾಯ ಹಂತಕ್ಕೆ ಬಂದಿದ್ದು, ಟನ್​ಗೆ 3,050 ರೂ. ಎಫ್.ಆರ್.ಪಿ. ದರ ನಿಗದಿ ಪಡಿಸಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇದು ಕಡಿಮೆಯೇ. ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಉತ್ತರಪ್ರದೇಶ ಸೇರಿ ಮತ್ತಿತರ ರಾಜ್ಯಗಳಲ್ಲಿ ಪ್ರತಿ ಟನ್​ಗೆ 4 ಸಾವಿರ ದರ ನೀಡಲಾಗುತ್ತಿದೆ. ಆದರೆ, ಕರ್ನಾಟಕದ ಕಾರ್ಖಾನೆಗಳು ಮಾತ್ರ ರೈತರಿಗೆ ಸೂಕ್ತ ಬೆಲೆ‌ ನೀಡುತ್ತಿಲ್ಲ. ಕನಿಷ್ಠ 3,600 ರೂ. ದರ ನಿಗದಿ ಪಡಿಸಬೇಕು. ಅದೇ ರೀತಿ ಕಾರ್ಖಾನೆಗಳಿಂದ ಸರ್ಕಾರಕ್ಕೆ ಹೋಗುತ್ತಿರುವ ತೆರಿಗೆಯಲ್ಲಿ ಅರ್ಧ ಭಾಗವನ್ನು ಎಂದರೆ 3 ಸಾವಿರ ರೂ., ಎಲ್ಲಾ ಸೇರಿ 6,600 ರೂ. ಕೊಡಬೇಕು ಎಂಬುದು ರೈತರ ವಾದವಾಗಿದೆ.

ತೂಕದಲ್ಲಿ ಆಗುವ ಮೋಸ ತಡೆಯಬೇಕು:"ತೂಕದಲ್ಲಿ ಆಗುತ್ತಿರುವ ಮೋಸ ತಡೆಗಟ್ಟಲು ಸರ್ಕಾರದಿಂದಲೇ ತೂಕದ ಯಂತ್ರ ಅಳವಡಿಸಬೇಕು. ಈ ಬಜೆಟ್​ನಲ್ಲಿ ಸರ್ಕಾರ ಈ ನಿರ್ಣಯ ಕೈಗೊಳ್ಳಬೇಕು. ಕಟಾವು ಮತ್ತು ಸಾಗಾಣಿಕೆಯಲ್ಲಿ ಆಗುತ್ತಿರುವ ಮೋಸಕ್ಕೂ ಕಡಿವಾಣ ಹಾಕಬೇಕು. ಅಲ್ಲದೇ ಶಾಸನಬದ್ಧವಾಗಿ ಸ್ಥಾಪಿತವಾಗಿರುವ ಕಬ್ಬು ನಿಯಂತ್ರಣ ಮಂಡಳಿಗೆ ಶಕ್ತಿ ತುಂಬುವ ಅವಶ್ಯಕತೆಯಿದೆ. ಯಾಕೆಂದರೆ ಕಬ್ಬು ಮತ್ತು ಸಕ್ಕರೆ ನಿಯಂತ್ರಿಸುವುದು ಸಕ್ಕರೆ ಇಲಾಖೆ, ಸಹಕಾರ ಇಲಾಖೆ ಕಾನೂನು ಪಾಲಿಸುತ್ತದೆ. ಕಾರ್ಖಾನೆಗಳನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿಯಂತ್ರಿಸುತ್ತದೆ. ಹಾಗಾಗಿ, ಯಾರು ಇದರ ನಿಜವಾದ ಮುಖ್ಯಸ್ಥರು ಎಂಬ ಗೊಂದಲವಿದೆ. ಆದ್ದರಿಂದ ಕಬ್ಬು ನಿಯಂತ್ರಣ ಮಂಡಳಿಗೆ ಸ್ವತಂತ್ರ ಅಧಿಕಾರ ನೀಡಬೇಕು. ಇನ್ನು ಕಬ್ಬಿನ‌ ಲಾಭಾಂಶದಲ್ಲಿ 100 ರೂ. ಪ್ರೋತ್ಸಾಹ ಧನ, ಇಥೆನಾಲ್ ಲಾಭಾಂಶದಲ್ಲಿ 50 ರೂ. ನೀಡುತ್ತೇವೆಂದು ಬೊಮ್ಮಾಯಿ ಸರ್ಕಾರದಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಅದಕ್ಕೆ ಕೋರ್ಟ್​ನಲ್ಲಿ ಕಾರ್ಖಾನೆ ಮಾಲೀಕರು ತಡೆಯಾಜ್ಞೆ ತಂದಿದ್ದಾರೆ. ಆ ನಿಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರ ರೈತರ ಪರ ನಿಲ್ಲಬೇಕಿದೆ" ಎಂದು ಭಾರತೀಯ ಕೃಷಿಕ‌ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದರು.

"ಒಂದು ಟನ್ ಕಬ್ಬಿನಿಂದ ಉತ್ಪಾದನೆಯಾಗುವ ಸ್ಪಿರಿಟ್​ನಿಂದ ಸರ್ಕಾರಕ್ಕೆ ಸರಾಸರಿ 4900 ರೂ. ಆದಾಯವಾದರೆ, ಇಥೆನಾಲ್, ಪ್ರೆಸ್ ಮಡ್ ಮತ್ತಿತರ ಉಪ ಉತ್ಪನ್ನಗಳ ಆದಾಯವೂ ಸಾಕಷ್ಟಿದೆ. ಆದರೆ, ಕರ್ನಾಟಕದಲ್ಲಿ ನೀಡಿದಷ್ಟು ಕಡಿಮೆ ದರ ಇನ್ನೆಲ್ಲೂ ಇಲ್ಲ. ಗುಜರಾತ್ ರಾಜ್ಯದಲ್ಲಿ ನೀಡಲಾಗುತ್ತಿರುವ ದರವನ್ನು ಮಾದರಿಯಾಗಿಟ್ಟುಕೊಂಡು ಕರ್ನಾಟಕದಲ್ಲಿಯೂ ದರ ನಿಗದಿ ಮಾಡಬೇಕು. ಸಾಗಣ ವೆಚ್ಚ ಕಳೆದು ರೈತರಿಗೆ ನಿವ್ವಳ ಲಾಭ ಕೈ ಸೇರುವಂತಾಗಬೇಕು." ಒತ್ತಾಯಿಸಿದರು.

ರೈತ ಮುಖಂಡ ಪ್ರಕಾಶ ನಾಯಿಕ‌ ಮಾತನಾಡಿ, "ಬೆಳಗಾವಿ ಅಧಿವೇಶನ ವೇಳೆ ಮುಖ್ಯಮಂತ್ರಿಗಳ ಜೊತೆಗಿನ ಸಭೆಯಲ್ಲಿ‌ ಕಬ್ಬು ಬೆಳೆಗಾರರಿಗೆ ತೂಕ, ದರ, ಎಫ್.ಆರ್.ಪಿ., ರಿಕವರಿ ಸೇರಿ ಎಲ್ಲೆಲ್ಲಿ ಮೋಸ ಆಗುತ್ತಿದೆ ಎಂದು ವಿವರವಾಗಿ ತಿಳಿಸಿದ್ದೇವೆ. ಹಾಗಾಗಿ, ಈ ಮೋಸ ತಡೆಗಟ್ಟಿ‌ ಬಿಟ್ಟರೆ ಶೇ.80ರಷ್ಟು ಸಮಸ್ಯೆ ಬಗೆಹರಿದ ಹಾಗೆ. ರಾಜಕಾರಣಿಗಳ ನಿಯಂತ್ರಣದಲ್ಲಿ ಕಾರ್ಖಾನೆಗಳು ಇರುವುದರಿಂದ ರೈತರಿಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ. ಸರ್ಕಾರದಲ್ಲಿ ಅವರು ಅಷ್ಟೊಂದು ಪ್ರಭಾವಿಗಳಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 26 ಸಕ್ಕರೆ ಕಾರ್ಖಾನೆಗಳಿದ್ದು, ಇದರಲ್ಲಿ ಬಹುತೇಕ ಕಾರ್ಖಾನೆಗಳು ರಾಜಕಾರಣಿಗಳ ಒಡೆತನ ಮತ್ತು ಹಿಡಿತದಲ್ಲಿವೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಅವರು ಕಬ್ಬು ಬೆಳೆಗಾರರನ್ನು ಉಳಿಸಬೇಕು" ಎಂದು ಒತ್ತಾಯಿಸಿದರು.

ಇದನ್ನೂ ಓದಿ:ರಾಜ್ಯ ಬಜೆಟ್: ಕರಾವಳಿ ಮೀನುಗಾರರ ನಿರೀಕ್ಷೆಗಳೇನು?

Last Updated : Feb 14, 2024, 12:14 PM IST

ABOUT THE AUTHOR

...view details