ಬೆಳಗಾವಿ: "ಕನ್ನಡ ಅತ್ಯಂತ ಸುಂದರ ಮತ್ತು ಪ್ರಾಚೀನ ಭಾಷೆ. ಕಲಿಯೋಕೆ ತುಂಬಾ ಕಷ್ಟ. ಆದರೆ, ಇಷ್ಟಪಟ್ಟು ಕಲಿತಿದ್ದೇನೆ. ದೂರದ ಈಶಾನ್ಯ ರಾಜ್ಯದಿಂದ ಬಂದ ನಾನು ಕನ್ನಡ ಕಲಿತಿದ್ದೇನೆ ಎಂದರೆ, ಇಲ್ಲಿಯೇ ಹುಟ್ಟಿದವರು ಕನ್ನಡ ಮಾತಾಡದಿದ್ದರೆ ಹೇಗೆ? ನಾವು ಯಾವ ರಾಜ್ಯದ ಅನ್ನ ಉಣ್ಣುತ್ತೇವೋ ಅಲ್ಲಿನ ಭಾಷೆ ಮಾತಾಡುವುದು ನಮ್ಮ ಆದ್ಯ ಕರ್ತವ್ಯ" ಎಂದು ಬೆಳಗಾವಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದ್ದಾರೆ.
ಹೌದು, ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಈಟಿವಿ ಭಾರತ ಪ್ರತಿನಿಧಿ ನಡೆಸಿದ ಸಂದರ್ಶನದಲ್ಲಿ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಕನ್ನಡ ಬಗೆಗಿನ ತಮ್ಮ ಪ್ರೀತಿ, ಅಭಿಮಾನ ಹಂಚಿಕೊಂಡಿದ್ದು ಈ ರೀತಿ.
"ನಾನು ಮೂಲತಃ ಮೇಘಾಲಯ ರಾಜ್ಯದ ಗ್ರಾಮೀಣ ಪ್ರದೇಶದಿಂದ ಬಂದವನು. ಶಿಲ್ಲಾಂಗ್ನಲ್ಲಿ ವಿದ್ಯಾಭ್ಯಾಸ ಆಗಿದ್ದು, ಎಂಎ ಪದವಿ ಪಡೆದಿದ್ದೇನೆ. ನಮ್ಮದು ಖಾಸಿ ಭಾಷೆ. ಆದರೆ, ಹೆಚ್ಚು ನಾವು ಇಂಗ್ಲಿಷ್ ಭಾಷೆಯನ್ನೇ ಬಳಸುತ್ತೇವೆ. ನನ್ನ ತಂದೆ ಏರ್ಫೋರ್ಸ್ನಲ್ಲಿ ಕೆಲಸ ಮಾಡಿ, ನಿವೃತ್ತಿಯಾಗಿದ್ದು, ಸದ್ಯಕ್ಕೆ ಎಲ್ಲರೂ ಶಿಲ್ಲಾಂಗ್ನಲ್ಲಿ ವಾಸವಿದ್ದಾರೆ. ಇನ್ನು ನನ್ನ ಕಿರಿಯ ಸಹೋದರ ಹೊರತುಪಡಿಸಿ ಉಳಿದ ಸಹೋದರರು ಸರ್ಕಾರಿ ನೌಕರಿಯಲ್ಲಿದ್ದಾರೆ" ಎಂದು ತಿಳಿಸಿದರು.
ಕನ್ನಡ ಕಲಿಯಲು ಪತ್ನಿ ಸಹಾಯ:"ಆರಂಭದಲ್ಲಿ ನಾನು ಕರ್ನಾಟಕಕ್ಕೆ ನೇಮಕಾತಿ ಹೊಂದಿದ ಮೇಲೆ ಸಾಕಷ್ಟು ಭಾಷೆ ಸಮಸ್ಯೆ ಉಂಟಾಯಿತು. ಎಲ್ಲ ದಾಖಲೆಗಳು ಕನ್ನಡ ಭಾಷೆಯಲ್ಲಿ ಇರುತ್ತಿದ್ದವು. ಕನ್ನಡ ಗೊತ್ತಿಲ್ಲದ ಹಿನ್ನೆಲೆಯಲ್ಲಿ ನನ್ನ ಬಳಿ ತಮ್ಮ ಕಷ್ಟ ಹೇಳಿಕೊಳ್ಳಲು ಬರುತ್ತಿದ್ದ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸಲು ಸಾಧ್ಯವಾಗುತ್ತಿರಲಿಲ್ಲ. ಅವರು ಏನು ಹೇಳುತ್ತಿದ್ದಾರೆ ಎಂಬುದೂ ಅರ್ಥ ಆಗುತ್ತಿರಲಿಲ್ಲ. ನಂತರ ಕನ್ನಡ ಕಲಿಯಲು ಶುರು ಮಾಡಿದೆ. ಆರಂಭದಲ್ಲಿ ಕನ್ನಡ ವ್ಯಾಕರಣ ಕಲಿತೆ. ಹಲವು ಪುಸ್ತಕ ಓದಿದೆ. ಒಬ್ಬ ಕನ್ನಡ ಶಿಕ್ಷಕರನ್ನು ನೇಮಿಸಿಕೊಂಡೆ. ಅಲ್ಲದೇ ನನ್ನ ಪತ್ನಿ ಹಾಸನ ಜಿಲ್ಲೆಯವರು. ಹಾಗಾಗಿ, ಕನ್ನಡ ಕಲಿಯಲು ನನಗೆ ಅವರು ಕೂಡ ಸಾಕಷ್ಟು ಸಹಾಯ ಮಾಡಿದರು" ಎನ್ನುತ್ತಾರೆ ಯಡಾ ಮಾರ್ಟಿನ್ ಮಾರ್ಬನ್ಯಾಂಗ್.
ಕನ್ನಡವನ್ನು ಇಂಗ್ಲಿಷ್ ಮತ್ತು ಖಾಸಿ ಭಾಷೆಗಳ ಜೊತೆಗೆ ಹೋಲಿಕೆ ಮಾಡಿದ್ದೇನೆ. ಇವುಗಳಿಗಿಂತ ಕನ್ನಡ ತುಂಬಾ ಸಂಕೀರ್ಣ, ಅತ್ಯಾಧುನಿಕತೆಯಿಂದ ಕೂಡಿದೆ. ಕನ್ನಡದಲ್ಲಿರುವ ವ್ಯಾಕರಣ ವಿಧಾನ ಕೂಡ ಆ ರೀತಿ ಇಲ್ಲ. ಇದೊಂದು ಸುಂದರ ಮತ್ತು ಸುದೀರ್ಘ ಇತಿಹಾಸ ಹೊಂದಿರುವ ಭಾಷೆ" ಎಂದು ವ್ಯಾಖ್ಯಾನಿಸುತ್ತಾರೆ ಯಡಾ ಮಾರ್ಟಿನ್ ಮಾರ್ಬನ್ಯಾಂಗ್.