ವಿಠಲರಾವ್ ಕೃಷ್ಣರಾವ್ ಯಾಳಗಿ (ETV Bharat) ಬೆಳಗಾವಿ: ಒಂದು ಊರಲ್ಲಿ ಒಬ್ಬರು ಇಲ್ಲವೇ ಇಬ್ಬರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ್ದೆ ಅಪರೂಪ. ಆದರೆ, ಆ ಇಡೀ ಕುಟುಂಬ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿತ್ತು. ಅಲ್ಲದೇ ಮನೆಯಲ್ಲಿ ತಾಯಿ, ಅಜ್ಜಿ ಇಬ್ಬರನ್ನು ಬಿಟ್ಟು ಒಂದೇ ಕುಟುಂಬದ ಮಹಿಳೆಯರು ಸೇರಿ 13 ಸದಸ್ಯರು ಜೈಲಿಗೂ ಹೋಗಿದ್ದರು. ಯಾರು ಅವರು..? ಬ್ರಿಟಿಷರ ವಿರುದ್ಧ ಹೇಗಿತ್ತು ಅವರ ಹೋರಾಟ..? ಆ ಕುರಿತ ವಿಶೇಷ ವರದಿ ಇಲ್ಲಿದೆ.
ಬೆಳಗಾವಿ ಮಣ್ಣಿನಲ್ಲಿ ಸ್ವಾತಂತ್ರ್ಯದ ಕಿಚ್ಚು; ಹೌದು, ಬೆಳಗಾವಿ ಮಣ್ಣಿನ ಕಣ ಕಣದಲ್ಲೂ ದೇಶಭಕ್ತಿ ತುಂಬಿದೆ. ಇದು ಕ್ರಾಂತಿಯ ನೆಲ, ಬ್ರಿಟಿಷರಿಗೆ ಮೊದಲ ಸೋಲಿನ ರುಚಿ ತೋರಿಸಿದ ವೀರರಾಣಿ ಚನ್ನಮ್ಮನ ಹೆಮ್ಮೆಯ ನಾಡು. ಮಹಾತ್ಮ ಗಾಂಧೀಜಿ ಆಗಮಿಸಿದ ಪ್ರಭಾವಳಿ ಅಲ್ಲದೇ ಅತೀ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ದೇಶಕ್ಕೆ ಸಮರ್ಪಿಸಿದ ಹೆಗ್ಗಳಿಕೆಯೂ ಬೆಳಗಾವಿಗಿದೆ. ಆದರೆ, ಒಂದಿಡೀ ಕುಟುಂಬವೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದ್ದು ಅಪರೂಪ. ಅಂತಹ ದಾಖಲೆಗೆ ಸಾಕ್ಷಿಯಾದವರು ಬೆಳಗಾವಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿಠಲರಾವ್ ಕೃಷ್ಣರಾವ್ ಯಾಳಗಿ ಕುಟುಂಬ. ಸದ್ಯ ಪುತ್ರಿಯ ಜೊತೆಗೆ ಹನುಮಾನ್ ನಗರದ ಮನೆಯಲ್ಲಿ ವಾಸವಾಗಿರುವ 99 ವರ್ಷದ ವಿಠಲರಾವ್, ಪ್ರತಿ ಮಾತಿನಲ್ಲೂ ದೇಶಭಕ್ತಿ ಉಕ್ಕಿ ಬರುತ್ತದೆ.
78ನೇ ಸ್ವಾತಂತ್ರ್ಯೋತ್ಸವ ಶುಭ ಸಂದರ್ಭದಲ್ಲಿ ಈಟಿವಿ ಭಾರತ ಜೊತೆಗೆ ಮಾತಿಗಿಳಿದ ವಿಠಲ ಯಾಳಗಿ ಅವರು, "ನಮ್ಮ ಚಿಕ್ಕಪ್ಪ ಗೋವಿಂದರಾವ್ ಯಾಳಗಿ ಬಾಲಗಂಗಾಧರ ತಿಲಕರ ಅನುಯಾಯಿಗಳಾಗಿ, ಬ್ರಿಟಿಷರ ವಿರುದ್ಧ ತೊಡೆ ತಟ್ಟಿದ್ದರು. 1905ರಲ್ಲಿ ಬೆಳಗಾವಿಯ ಖಡೇಬಜಾರ್ ಕ್ರಾಸ್ನಲ್ಲಿ ವಿದೇಶಿ ಬಟ್ಟೆಗಳನ್ನು ಸುಡುವ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಅವರನ್ನು ಬ್ರಿಟಿಷರು ಬಂಧಿಸಿ 10 ರೂ. ದಂಡ ವಿಧಿಸಿದ್ದರು. ಆ ದಂಡದ ಮೊತ್ತವನ್ನು ತಿಲಕರು ತುಂಬಿದ್ದರು. 1923ರಲ್ಲಿ ನಮ್ಮ ಚಿಕ್ಕಪ್ಪ ನಿಧನರಾದರು. 1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನದಲ್ಲಿ ಗೋವಿಂದರಾವ್ ಯಾಳಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು. ಈ ಅಧಿವೇಶನ ನಡೆಯಲು ನಮ್ಮ ಚಿಕ್ಕಪ್ಪ ಮತ್ತು ಗಂಗಾಧರರಾವ್ ದೇಶಪಾಂಡೆ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ಪ್ರೇರಣೆಯಿಂದಲೇ ನಾನು ಚಳವಳಿಯಲ್ಲಿ ಧುಮುಕಿದೆ" ಎಂದು ಸ್ಮರಿಸಿದರು.
ಗೋವಿಂದರಾವ್ ಯಾಳಗಿ ಅವರ ಹೋರಾಟದ ಪ್ರಭಾವದಿಂದಾಗಿ ಅವರ ಸಹೋದರಾರದ ಕೃಷ್ಣರಾವ್ ಯಾಳಗಿ, ಜೀವನರಾವ್ ಯಾಳಗಿ ಅವರು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕಾಂಗ್ರೆಸ್ ಅಧಿವೇಶನ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರೊಂದಿಗೆ ಇವರ ಪತ್ನಿಯರೂ ಸಹ ಹೋರಾಟಕ್ಕೆ ಸಾಥ್ ನೀಡಿರುವುದು ಯಾಳಗಿ ಕುಟುಂಬದ ವೈಶಿಷ್ಟ್ಯ.
1942ರ "ಚಲೇಜಾವ್" ಚಳವಳಿ ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ಪ್ರಖರವಾಗಿ ನಡೆಯಿತು. ವಾಮನರಾವ್ ಬಿದರಿ, ರಾಮಚಂದ್ರ ವಡವಿ, ಅಣ್ಣು ಗುರೂಜಿ, ಶ್ರೀರಂಗ ಕಾಮತ, ಪುಂಡಕಲೀಕಜಿ, ಚನ್ನಪ್ಪ ವಾಲಿ, ಜಯದೇವ ಕುಲಕರ್ಣಿ ಮೊದಲಾದ ಜಿಲ್ಲೆಯ ಪ್ರಮುಖ ಕಾರ್ಯಕರ್ತರು ಭೂಗತರಾಗಿ ಚಳವಳಿಯ ನೇತೃತ್ವ ವಹಿಸಿದ್ದರು. ಈ ಹೋರಾಟದಲ್ಲಿ ಭಾಗವಹಿಸಿದ್ದ ಯಾಳಗಿ ಕುಟುಂಬದ ಗಜಾನನ, ಅರವಿಂದ, ವಿಠಲ್, ಹಣುಮಂತ, ಡಾಕ್ಟರ್ ಅನಂತ, ದತ್ತಾತ್ರೆಯ, ನಾನಾಸಾಹೇಬ, ವಸಂತ, ಕುಮಾರಿ ವಂದಾ ಸೇರಿ 13 ಜನರು ಜೈಲು ಸೇರಿದ್ದರು.
ಸ್ವಾತಂತ್ರ್ಯ ಒಂದೇ ಧ್ಯೇಯ:ಮಾತು ಮುಂದುವರಿಸಿದ ವಿಠಲರಾವ್ ಯಾಳಗಿ, "ನಮ್ಮದು ಬಂಗಾರದ ಆಭರಣಗಳ ಅಂಗಡಿ ಇತ್ತು. ಇನ್ನು ನಮ್ಮ ಮನೆ ಒಂದು ರೀತಿ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದುವಾಗಿತ್ತು. ಮನೆಯಲ್ಲಿ ಬರೀ ಬ್ರಿಟಿಷರನ್ನು ಹೇಗೆ ದೇಶಬಿಟ್ಟು ಓಡಿಸಬೇಕು ಎಂದೇ ಚರ್ಚೆ ಆಗುತ್ತಿತ್ತು. ಬ್ರಿಟಿಷರ ನಿದ್ದೆಗೆಡಿಸಿದ್ದ ನಮ್ಮ ಇಡೀ ಕುಟುಂಬವನ್ನು ಬಂಧಿಸಲಾಗಿತ್ತು. ನಮ್ಮ ತಂದೆ, ಇಬ್ಬರು ಚಿಕ್ಕಪ್ಪ, ಐವರು ಸಹೋದರರು, ನಾಲ್ವರು ಸಹೋದರಿಯರು ಸೇರಿ ನಾನು ಜೈಲು ಪಾಲಾಗಿದ್ದೆ. ಮನೆಯಲ್ಲಿ ತಾಯಿ ಮತ್ತು ಅಜ್ಜಿ ಮಾತ್ರ ಇದ್ದರು. 15 ದಿನ ಪೊಲೀಸ್ ಕಸ್ಟಡಿಯಲ್ಲಿ ನಮಗೆ ಕೊಡಬಾರದ ನೋವು ಕೊಟ್ಟಿದ್ದರು. ಹಿಮದ ಮೇಲೆ ಮಲಗಿಸಿ ಚಿತ್ರಹಿಂಸೆ ನೀಡಿದ್ದರು. ಆದರೂ ನಾವು ಧೃತಿಗೆಡಲಿಲ್ಲ. ನಮ್ಮ ಜೀವ ಬೇಕಾದರೆ ಹೋಗಲಿ, ಆದರೆ, ದೇಶಕ್ಕೆ ಸ್ವಾತಂತ್ರ್ಯ ಸಿಗುವುದೊಂದೇ ನಮ್ಮ ಮೂಲ ಧ್ಯೇಯವಾಗಿತ್ತು" ಎಂದು ದೇಶಭಕ್ತಿಯ ಮಾತುಗಳನ್ನಾಡಿದರು.
1942ರಲ್ಲೇ ತಿರಂಗ ಧ್ವಜ ಹಾರಾಟ: "ಬ್ಯಾರಿಸ್ಟರ್ ನಾಥಪೈ ಸೇರಿ ಹಲವಾರು ಜನರು ಸೇರಿಕೊಂಡು ನಾವು ಒಂದು ಗುಂಪು ಕಟ್ಟಿಕೊಂಡಿದ್ದೆವು. ಬೆಳಗಾವಿಯ ಫಸ್ಟ್ ರೈಲ್ವೆ ಗೇಟ್ನಲ್ಲಿ ರೈಲು ತಡೆಹಿಡಿದಿದ್ದೆವು. ಕ್ಯಾಂಪ್ ಪ್ರದೇಶದ ಬ್ರಿಟಿಷರ ಮನೆ ಮೇಲೆ ಬಾಂಬ್ ದಾಳಿ, ಟೆಲಿಫೋನ್ ವೈರ್ ಕತ್ತರಿಸುವುದು, ಶಿಂದಿಗಿಡ ಕಡೆಯುವುದು, ಚಂದನ- ತೇಗು ಆದಿ ನಿಷೇಧಿಸಲ್ಪಟ್ಟ ಗಿಡ ಕಡೆದು ಜಂಗಲ್ ಸತ್ಯಾಗ್ರಹ ಮಾಡುವುದು, ಹುಲಬನ್ನಿ ಕರ ಕೊಡದೆ ಅಡವಿಯಲ್ಲಿ ದನಕರುಗಳನ್ನು ಮೇಯಿಸುವುದು ಮತ್ತು ಜನಗಣತಿ ಬಹಿಷ್ಕಾರ, ಹೀಗೆ ಬ್ರಿಟಿಷರ್ ಕಾಯ್ದೆ ಭಂಗದ ಅನೇಕ ಚಳವಳಿ ಹೋರಾಟಗಳಲ್ಲಿ ಭಾಗಿಯಾಗಿದ್ದೆವು. ಇನ್ನು ಗಣಪತಿ ಗಲ್ಲಿ ಸಾರ್ವಜನಿಕ ಗ್ರಂಥಾಲಯದ ಮೇಲೆ 1942 ಸೆಪ್ಟೆಂಬರ್ ತಿಂಗಳಲ್ಲೇ ಚರಕ ಇರುವ ತಿರಂಗಾ ಧ್ವಜ ಹಾರಿಸಿದ್ದೆವು. 1 ವರ್ಷ ನಾನು ಜೈಲುವಾಸ ಅನುಭವಿಸಿದ್ದೆ. ಸಹೋದರರಾದ ಗಜಾನನ 3.5 ವರ್ಷ, ಅರವಿಂದ 2.5 ವರ್ಷ ಜೈಲಿನಲ್ಲಿದ್ದರು" ಎಂದು ವಿಠಲರಾವ್ ಯಾಳಗಿ ಆ ದಿನಗಳನ್ನು ನೆನಪಿಸಿಕೊಂಡರು.
1947ರ ಆಗಸ್ಟ್ 15ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಮೇಲೆ ಆಂಗ್ಲರ ಯೂನಿಯನ್ ಜಾಕ್ ಧ್ವಜ ಕೆಳಗಿಳಿಸಿ ನಮ್ಮ ರಾಷ್ಟ್ರಧ್ವಜ ಏರಿಸಿದಾಗ ಸಂಭ್ರಮ, ಖುಷಿಗೆ ಪಾರವೇ ಇರಲಿಲ್ಲ. ನಮ್ಮ ಅದೆಷ್ಟೋ ಹೋರಾಟಗಾರರ ತ್ಯಾಗ, ಬಲಿದಾನಕ್ಕೆ ನ್ಯಾಯ ಸಿಕ್ಕಿತು ಎಂದು ನಾವೆಲ್ಲಾ ನಿಟ್ಟುಸಿರು ಬಿಟ್ಟಿದ್ದೆವು. ಇನ್ನು 1938ರಲ್ಲಿ ಬಾಂಬೆ ಪ್ರಾಂತದ ಮುಖ್ಯಮಂತ್ರಿ ಆಗಿದ್ದ ಬಾಳಾಸಾಹೇಬ ಕೇರ್, ಸರ್ದಾರ್ ವಲ್ಲಭಬಾಯಿ ಪಟೇಲ್, ಮೊರಾರ್ಜಿ ದೇಸಾಯಿ ಸೇರಿ ಅನೇಕ ರಾಷ್ಟ್ರೀಯ ನಾಯಕರು ನಮ್ಮ ಮನೆಗೆ ಭೇಟಿ ನೀಡಿದ್ದಾರೆ. ಮಹಾತ್ಮ ಗಾಂಧೀಜಿ, ಸುಭಾಷ್ಚಂದ್ರ ಬೋಸ್, ಜವಾಹರಲಾಲ್ ನೆಹರು ಸೇರಿ ಅನೇಕರು ಬೆಳಗಾವಿಗೆ ಬಂದಾಗ ಅವರ ಕಾರ್ಯಕ್ರಮ ಮತ್ತು ಹೋರಾಟಕ್ಕೆ ಸಾಕ್ಷಿಯಾದ ಭಾಗ್ಯ ನನ್ನದು" ಎಂದು ಹರ್ಷ ವ್ಯಕ್ತಪಡಿಸಿದರು.
"ಆಗ ಸಿಕ್ಕ ಸ್ವಾತಂತ್ರ್ಯವನ್ನು ಶಾಶ್ವತವಾಗಿ ಇಟ್ಟುಕೊಳ್ಳುವುದು ಇಂದಿನ ಯುವಕರ ಜವಾಬ್ದಾರಿ. ದೇಶವನ್ನು ಪ್ರೀತಿಸಿ, ಅಭಿವೃದ್ಧಿ ಮಾಡಿ, ಇಡೀ ವಿಶ್ವದಲ್ಲಿ ಭಾರತ ನಂ.1 ಆಗಬೇಕು. ಮೊದಲು ಭ್ರಷ್ಟಾಚಾರ ಬಂದ್ ಆಗಬೇಕು. ಇಲ್ಲದಿದ್ದರೆ ದೇಶದ ಪ್ರಗತಿ ಸಾಧ್ಯವಿಲ್ಲ" ಎಂದು ಕಿವಿಮಾತು ಹೇಳಿದರು.
ವಿಠಲರಾವ್ ಯಾಳಗಿ ಅವರ ಪುತ್ರಿ ಡಾ. ನೀಲಾ ಮಾತನಾಡಿ, "ಇಂತಹ ಶ್ರೇಷ್ಠ ವ್ಯಕ್ತಿಯ ಮಗಳಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಎನಿಸುತ್ತದೆ. ದೇಶಭಕ್ತ ಯಾಳಗಿ ಕುಟುಂಬ ಕುಡಿಯಾಗಿ ಬಹಳಷ್ಟು ಖುಷಿ ಇದೆ" ಎನ್ನುತ್ತಲೇ, ಅವರ ಪೂರ್ವಜರ ತ್ಯಾಗ, ಹೋರಾಟ ನೆನೆದು ಭಾವುಕರಾದರು.
ಇದನ್ನೂ ಓದಿ:ಬೆಳ್ಳಿ ತೆರೆಮೇಲೆ ದೇಶಪ್ರೇಮ ಸಾರಿದ ಕನ್ನಡ ಚಿತ್ರಗಳ ಮೆಲುಕು ನೋಟ - Kannada Patriotic Movies