ಬೆಳಗಾವಿ:ಬೆಳಗಾವಿಯಲ್ಲಿ ಕ್ರಿಕೆಟ್ ವಿಚಾರಕ್ಕೆ ಎರಡು ಗುಂಪುಗಳ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಇಂದು ಸುದ್ದಿಗೋಷ್ಠಿ ಮಾಹಿತಿ ನೀಡಿದರು.
ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, "ಪ್ರಕರಣ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಎರಡು ಕೇಸ್ ದಾಖಲಾಗಿದೆ. ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಂದೇ ಸೆಕ್ಷನ್ ಅಡಿಯಲ್ಲಿ ಪ್ರಕರಣಗಳನ್ನು ಹಾಕಲಾಗಿದೆ. ನಿನ್ನೆ ಸಂಜೆ ಎರಡು ಗುಂಪುಗಳ ನಡುವೆ ಕ್ರಿಕೆಟ್ ವಿಚಾರಕ್ಕೆ ಗಲಾಟೆ ಆಗಿತ್ತು. ಚೆಂಡು ತರುವ ವಿಚಾರದಲ್ಲಿ ಸಣ್ಣ ಗಲಾಟೆಯಾಗಿದೆ. ಬಳಿಕ ಮನೆಗೆ ಬಂದಾಗ ಮತ್ತೆ ಗಲಾಟೆ ಮುಂದುವರೆದಿದೆ. ಯುವಕರು ಕೂಡಾ ಭಾಗಿಯಾಗಿದ್ದರು. ಒಂದು ಗುಂಪಿನವರು ಸ್ಟಂಪ್ನಿಂದ ಹೊಡೆದಿದ್ದಾರೆ. ಮತ್ತೊಂದು ಗುಂಪಿನ ಕಡೆಯಿಂದ ಕಲ್ಲೆಸೆತ, ಹಲ್ಲೆ ಆಗಿದೆ. ಕೂಡಲೇ ನಮ್ಮ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದರು. ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಎರಡೂ ಕಡೆಯಿಂದ 10 ಜನರನ್ನು ಬಂಧಿಸಿದ್ದೇವೆ. ಹತ್ತು ಜನರ ಪೈಕಿ ತಲ್ವಾರ್ ಹಿಡಿದ ಆರೋಪಿಯೂ ಇದ್ದಾನೆ. ಪೊಲೀಸರು ಸರಿಯಾದ ಸಮಯಕ್ಕೆ ಹೋಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ."