ಬೆಳಗಾವಿ: ಇಂದಿನ ಡಿಜಿಟಲ್ ಯುಗದಲ್ಲಿ ಅಳುವ ಮಕ್ಕಳ ಕೈಗೆ ಪೋಷಕರು ಮೊಬೈಲ್ ಕೊಡುವುದರಿಂದ ಏನೆಲ್ಲಾ ಅನಾಹುತ ಆಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೆಷ್ಟೋ ವಿದ್ಯಾರ್ಥಿಗಳು ಮೊಬೈಲ್ ಗೀಳಿನಲ್ಲಿ ತಮ್ಮನ್ನೇ ತಾವು ಮರೆತ ಉದಾಹರಣೆಗಳು ಇವೆ. ಅಂತಹದರಲ್ಲಿ ಬೆಳಗಾವಿಯ ವಿದ್ಯಾರ್ಥಿಯೋರ್ವ ಹಲವು ಹೊಸ ಅನ್ವೇಷಣೆಗಳನ್ನು ಮಾಡಿದ್ದು, ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎನ್ನುವಂತೆ, ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾನೆ. ಅಷ್ಟಕ್ಕೂ ಆ ವಿದ್ಯಾರ್ಥಿ ಮಾಡಿದ ಅನ್ವೇಷಣೆ ಏನು..? ಎಂಬ ಕುರಿತು ಇಲ್ಲಿದೆ ಈಟಿವಿ ಭಾರತದ ವಿಶೇಷ ವರದಿ..
ಹೌದು.., ಹೊರಗೆ ಒಣ ಹಾಕಿರುವ ಬಟ್ಟೆಗಳನ್ನು ಮಳೆಯಿಂದ ರಕ್ಷಿಸುವ ಮಾದರಿ, ಲೋ ಬಜೆಟ್ ಪ್ರೊಜೆಕ್ಟರ್, ಗ್ಲೂ ಗನ್, ಪ್ಲಾಸ್ಟಿಕ್ ಹಾಟ್ ಕಟರ್ ತಯಾರಿ, ಬೆಳಕಿನ ಮೂಲಕ ಶಬ್ಧಗಳ ಪ್ರಸರಣ, ಲೋ ಪ್ರೈಸ್ ಹ್ಯಾಂಡ್ ಗ್ರ್ಯಾಂಡರ್ ಹೀಗೆ ಹಲವು ಅನ್ವೇಷಣೆಗಳನ್ನು ಮಾಡುವ ಮೂಲಕ ತನ್ನೊಳಗೊಬ್ಬ ವಿಜ್ಞಾನಿ ಇದ್ದಾನೆ ಎಂಬುದನ್ನು ಈ ಚೋಟಾ ವಿಜ್ಞಾನಿ ಸಾಬೀತು ಮಾಡಿದ್ದಾನೆ.
ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ವಿಜಯನಗರ ನಿವಾಸಿ ಅಶ್ವಜಿತ್ ಛಲವಾದಿ ಎಂಬ 15 ವರ್ಷದ ಬಾಲಕನೇ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಾಧನೆ ಮಾಡಬೇಕು ಎಂಬ ತುಡಿತ ಹೊಂದಿರುವ ಬಾಲಕ. ಬೆಳಗಾವಿ ಕೆಎಲ್ಇ ಸಂಸ್ಥೆಯ ಗಿಲಗಿಂಚಿ-ಅರಟಾಳ ಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದು, ತಂದೆ ಅಜಯ್ ಛಲವಾದಿ, ಅಪೋಲೋ ಫಾರ್ಮಸಿ ಮೆಡಿಕಲ್ನಲ್ಲಿ ಕೆಲಸ ಮಾಡುತ್ತಾರೆ. ತಾಯಿ ಕವಿತಾ ಅವರು ಸ್ವಂತ ಮೆಸ್ ನಡೆಸುತ್ತಾರೆ. ಬಡತನದಲ್ಲೇ ಅರಳುತ್ತಿರುವ ಈ ಪ್ರತಿಭೆಗೆ ಸೂಕ್ತ ಮಾರ್ಗದರ್ಶನ, ಆರ್ಥಿಕ ನೆರವು ಸಿಕ್ಕರೆ ದೊಡ್ಡ ಮಟ್ಟದ ಸಾಧನೆ ಮಾಡುವುದರಲ್ಲಿ ಸಂಶಯವೇ ಇಲ್ಲ.
ಕೊಳವೆ ಬಾವಿಯಲ್ಲಿ ಬಿದ್ದ ಮೋಟಾರ್ ಮೇಲೆತ್ತಲು ಅಶ್ವಜಿತ್ ಪ್ಲಾನ್: ರೈತರು ಕೊಳವೆಬಾವಿ ಕೊರೆಸಿದಾಗ, ಕೆಲವೊಂದು ಕಾರಣದಿಂದ ಮೋಟಾರ್ ಕೆಳಗೆ ಉಳಿಯುತ್ತದೆ. ಆಗ ನೀರು ಮೇಲೆ ಬರಲು ಸಾಧ್ಯವಾಗುವುದಿಲ್ಲ. ಆ ಮೋಟಾರ್ ಮೇಲೆತ್ತಲು ಈವರೆಗೆ ಯಾರೂ ಸಮರ್ಪಕ ಯಂತ್ರ ತಯಾರಿಸಿಲ್ಲ. ಆ ಯಂತ್ರ ತಯಾರಿಸುವ ಗುರಿಯನ್ನು ಅಶ್ವಜಿತ್ ಹೊಂದಿದ್ದಾನೆ. ಇದರಿಂದ ಸಾವಿರಾರು ರೂ. ಖರ್ಚು ಮಾಡಿ ಕೊರೆಸಿರುವ ಬೋರ್ ಮತ್ತೆ ಪುನರ್ ಬಳಕೆ ಮಾಡಬಹುದು. ಇದರಲ್ಲಿ ಈತ ಯಶಸ್ವಿಯಾದರೆ ಬೋರ್ ಹಾಳಾಗುವುದನ್ನು ತಪ್ಪಿಸಿ, ರೈತರಿಗೆ ತುಂಬಾ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲ ರೈತರ ಕೊಳವೆಬಾವಿ ಪರಿಶೀಲಿಸಿರುವ ಅಶ್ವಜಿತ್, ಸಮಸ್ಯೆ ತಿಳಿದುಕೊಂಡು ಯಂತ್ರ ತಯಾರಿಸುವ ಯೋಜನೆ ಹಾಕಿಕೊಂಡಿದ್ದಾನೆ.
ಆತನ ಅನ್ವೇಷಣೆಗಳು, ಬಳಸಿರುವ ವಸ್ತು ಮತ್ತು ಉಪಯೋಗಗಳ ವಿವರ:ಹೊರಗೆ ಒಣ ಹಾಕಿರುವ ಬಟ್ಟೆಗಳನ್ನು ಮಳೆಯಿಂದ ರಕ್ಷಿಸುವ ಮಾದರಿ ತಯಾರಿಸಲು ಡಿಸಿ ಮೋಟಾರ್, ಅಲ್ಯೂಮಿನಿಯಂ ಬ್ಲಾಕ್ ಪೇಪರ್, 6-12 ವೋಲ್ಟ್ ಬ್ಯಾಟರಿ ಬಳಸಿರುವ ಅಶ್ವಜಿತ್, ಮಳೆ ಬಂದ ತಕ್ಷಣ ಒಣಗೆ ಹಾಕಿರುವ ಬಟ್ಟೆಗಳು ತಾವೇ ಒಳಗೆ ಬರುವ ಮತ್ತು ಬಿಸಿಲು ಬರುತ್ತಿದ್ದಂತೆ ಹೊರಗೆ ಹೋಗಿ ಮತ್ತೆ ಒಣಗುವ ವ್ಯವಸ್ಥೆ ಮಾಡಿದ್ದಾನೆ. ಪ್ರಾಯೋಗಿಕವಾಗಿ ರಟ್ಟಿನ ಮನೆಯಲ್ಲಿ ಪ್ರಯೋಗಿಸಲಾಗಿದ್ದು, ಮುಂದೆ ಮನೆಯಲ್ಲಿ ಪ್ರಯೋಗಿಸುವ ಉತ್ಸಾಹದಲ್ಲಿದ್ದಾನೆ.
- ಕಡಿಮೆ ಬಜೆಟ್ ಪ್ರೊಜೆಕ್ಟರ್: ಇದಕ್ಕೆ ಮ್ಯಾಗ್ನಿಫೈನ್ ಗ್ಲಾಸ್, ಮೊಬೈಲ್ ಸ್ಟಾಂಡ್, ರಟ್ಟನ್ನು ಬಳಸಲಾಗಿದೆ. ಯಾರ ಮನೆಯಲ್ಲಿ ಟಿವಿ ಇಲ್ಲವೋ, ಅವರು ತಮ್ಮ ಮೊಬೈಲ್ ಮೂಲಕ ಗೋಡೆಯ ಮೇಲೆ ದೊಡ್ಡ ಪರದೆಯಲ್ಲಿ ವೀಕ್ಷಣೆ ಮಾಡಬಹುದು.
- ಗ್ಲೂ ಗನ್: ಕಾಪರ್ ವೈರ್, ಡಿಸಿ ವೈರ್, ಹಾಳಾದ ಗ್ಲೂ ಗನ್ ಬಳಸಲಾಗಿದೆ. ಇನ್ನು ಪ್ಲಾಸ್ಟಿಕ್ ಹಾಟ್ ಕಟರ್ ತಯಾರಿಸಲು ಕಬ್ಬಿಣದ ಪಟ್ಟಿ, ಕಾಪರ್ ವೈರ್, ಡಿಸಿ ವೈರ್ ಬಳಸಲಾಗಿದೆ. ಈ ಎರಡೂ ವಸ್ತುಗಳನ್ನು ಪ್ರೊಜೆಕ್ಟ್ ತಯಾರಿಕೆಯಲ್ಲಿ ವಿವಿಧ ರಟ್ಟಿನ ತುಕಡಿ, ಮೋಟಾರ್ಗಳನ್ನು ಅಂಟಿಸಲು ಬಳಸಬಹುದು.
- ಬೆಳಕಿನ ಮೂಲಕ ಶಬ್ಧಗಳ ಪ್ರಸರಣ:ಎಂಪ್ಲಿಪಾಯರ್, ಸೋಲಾರ್ ಪ್ಲೇ, 12 ವೋಲ್ಟ್ ಎಲ್ಇಡಿ ಬಲ್ಬ್ ಬಳಸಲಾಗಿದೆ. ಬಲ್ಬ್ನಿಂದ ಬರುವ ಬೆಳಕು ಮತ್ತು ಶಬ್ಧ ಸೋಲಾರ್ ಪ್ಲೇಟ್ ಮೇಲೆ ಬಿದ್ದಾಗ, ಶಬ್ಧವನ್ನು ಹೀರಿಕೊಳ್ಳುತ್ತದೆ. ಸೋಲಾರ್ ಪ್ಲೇಟ್ ಔಟ್ಫುಟ್ನಲ್ಲಿ ಸ್ಪೀಕರ್ ಅಂಟಿಸಿದಾಗ ಬೆಳಕಿನ ಮೂಲಕ ಹೊರಟ ಶಬ್ಧವು, ಈ ಸ್ಪೀಕರ್ ಮೂಲಕ ಹೊರ ಹೊಮ್ಮುತ್ತದೆ.
- ಲೋ ಪ್ರೈಜ್ ಹ್ಯಾಂಡ್ ಗ್ರ್ಯಾಂಡರ್:ವೈಂಡಿಂಗ್ ಬದಲಿಸಿದ ಮೋಟಾರ್(775), ಹ್ಯಾಂಡ್ ಗ್ರ್ಯಾಂಡರ್ ಆಲ್ ಬ್ಲೇಡ್, ಪಿವಿಸಿ ಪೈಪ್, ಸ್ವಿಚ್, 3 ಎಂಎಂ ವೈರ್ ಬಳಸಲಾಗಿದ್ದು, ಇದನ್ನು ಕಟ್ಟಡ ನಿರ್ಮಾಣದ ವೇಳೆ ಕಬ್ಬಿಣದ ವಸ್ತುಗಳನ್ನು ಕತ್ತರಿಸಲು ಮತ್ತು ಆಕಾರ ಬದಲಿಸಲು ಬಳಸಬಹುದಾಗಿದೆ. ಅದೇ ರೀತಿ ಮನೆಯಲ್ಲಿರುವ ಕಬ್ಬಿಣದ ವಸ್ತುಗಳನ್ನು ಕತ್ತರಿಸಲು ಬಳಸಬಹುದು. ಅಲ್ಲದೇ ಮನೆಯಲ್ಲಿನ ಚಾಕು, ಈಳಿಗೆ ಸೇರಿ ಮತ್ತಿತರ ವಸ್ತುಗಳನ್ನು ಚೂಪಾಗಿಸಲು ಉಪಯೋಗಿಸಬಹುದು.