ಕರ್ನಾಟಕ

karnataka

ಬೆಂಗಳೂರಿನ ರಸ್ತೆಗಳ ಸ್ಥಿತಿಗತಿ ತಿಳಿಯಲು ಕೃತಕ ಬುದ್ಧಿಮತ್ತೆ ಕ್ಯಾಮರಾಗಳ ಬಳಕೆ - artificial intelligence cameras

By ETV Bharat Karnataka Team

Published : May 31, 2024, 8:02 PM IST

ಕಾರ್ಯನಿರ್ವಾಹಕ ಇಂಜಿನಿಯರ್​ಗಳ ವಾಹನಗಳಲ್ಲಿ ಅಳವಡಿಸಿರುವ ಎಐ ಕ್ಯಾಮರಾಗಳು ರಸ್ತೆಯಲ್ಲಿ ಗುಂಡಿಗಳನ್ನು ಸೆರೆ ಹಿಡಿದು ಮಾಹಿತಿ ನೀಡಲಿವೆ.

AI cameras
ಕೃತಕ ಬುದ್ಧಿಮತ್ತೆ ಕ್ಯಾಮರಾ (ETV Bharat)

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಸ್ತೆಗಳ ಸ್ಥಿತಿ-ಗತಿಗಳನ್ನು ತಿಳಿದುಕೊಳ್ಳಲು ಕೃತಕ ಬುದ್ಧಿಮತ್ತೆಯ (ಎಐ) ಕ್ಯಾಮರಾಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಈಗಾಗಲೇ 15 ಎಐ ಕ್ಯಾಮರಾಗಳನ್ನು ಖರೀದಿ ಮಾಡಲಾಗಿದೆ.

ಈ ಕುರಿತು ಮಾತನಾಡಿರುವ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, "ನಗರದಲ್ಲಿ ಸುಮಾರು 1,400 ಕಿ.ಮೀ. ಉದ್ದದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆ ಜಾಲವಿದ್ದು, ಮಳೆಯಿಂದಾಗಿ ಗುಂಡಿ ಬಿದ್ದು ಹದಗೆಟ್ಟು ಹೋಗಿವೆ. ಭೌತಿಕವಾಗಿ ಎಲ್ಲ ರಸ್ತೆಗಳನ್ನು ಪರಿಶೀಲಿಸುವುದು ಕಷ್ಟವಾಗುತ್ತದೆ. ಹೀಗಾಗಿ ಎಐ ಕ್ಯಾಮರಾಗಳ ಮೂಲಕ ರಸ್ತೆ ಗುಂಡಿಗಳು, ಕಸ, ರಸ್ತೆ ಬದಿಯಲ್ಲಿನ ಧೂಳನ್ನು ಗುರುತಿಸಿ ತೆರವು ಮಾಡಲು ಉದ್ದೇಶಿಸಲಾಗಿದೆ" ಎಂದು ತಿಳಿಸಿದ್ದಾರೆ.

"ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳ ಸ್ಥಿತಿಗತಿ ಅರಿಯಲು ಎಐ ಕ್ಯಾಮರಾಗಳನ್ನು 5 ಲಕ್ಷ ರೂ.ಗಳಲ್ಲಿ ಖರೀದಿಸಲಾಗಿದೆ. ಈ ಕ್ಯಾಮರಾಗಳನ್ನು ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್‌ಗಳ ವಾಹನಗಳಲ್ಲಿ ಅಳವಡಿಸಲಾಗುವುದು. ಕ್ಯಾಮರಾಗಳನ್ನು ಅಳವಡಿಸಿರುವ ವಾಹನಗಳು ಗಂಟೆಗೆ 5 ಕಿ.ಮೀ. ವೇಗದಲ್ಲಿ ಸಂಚರಿಸಿ, ರಸ್ತೆ ಗುಂಡಿಗಳನ್ನು ಸೆರೆ ಹಿಡಿದು ಮಾಹಿತಿ ನೀಡಲಿವೆ" ಎಂದು ಹೇಳಿದ್ದಾರೆ.

"ಪ್ರತಿಯೊಂದು ವಾಹನವು ನಾಲ್ಕೈದು ತಾಸು ಸಂಚರಿಸಲಿದ್ದು, 20 ಕಿ.ಮೀ.ನಷ್ಟು ರಸ್ತೆ ಮಾರ್ಗವನ್ನು ಸ್ಕ್ಯಾನ್ ಮಾಡಲಿವೆ. ಇದರಿಂದ ರಸ್ತೆಗಳ ವಸ್ತುಸ್ಥಿತಿ ತಿಳಿದು, ಕಾಮಗಾರಿಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ. ಇದರ ಯಶಸ್ಸು ಆಧರಿಸಿ ವಾರ್ಡ್ ರಸ್ತೆಗಳ ಪರಿಶೀಲನೆಗೂ ಎಐ ಕ್ಯಾಮರಾಗಳನ್ನು ಬಳಸಲಾಗುವುದು" ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ವಾಹನ ನಿಲುಗಡೆ ನೀತಿ 2.0 ಪರಿಣಾಮಕಾರಿ ಜಾರಿಗೆ ಹೈಕೋರ್ಟ್ ಸೂಚನೆ - Parking Policy

ABOUT THE AUTHOR

...view details