ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಪಾವತಿಗೆ ನೀಡಿದ್ದ ಒನ್ ಟೈಮ್ ಸೆಟಲ್‌ಮೆಂಟ್ (ಓಟಿಎಸ್) ಗಡುವು ಮುಗಿದಿದೆ. ಈ ಬೆನ್ನಲ್ಲೇ ತೆರಿಗೆ ಪಾವತಿಸದವರ ಆಸ್ತಿಗಳನ್ನು ಹರಾಜು ಹಾಕಿ, ಬಿಸಿ ಮುಟ್ಟಿಸಲು ಪಾಲಿಕೆ ಮುಂದಾಗಿದೆ.
ಮೂರು ಹಂತದ ನೋಟಿಸ್ ನೀಡಿದರೂ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದರೆ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಮೂಲಕ ಬಾಕಿ ತೆರಿಗೆ ವಸೂಲಿಗೆ ಪಾಲಿಕೆಯು ತೀವ್ರ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಸಾಕಷ್ಟು ಅವಕಾಶ ಕೊಟ್ಟರೂ ಬಾಕಿ ತೆರಿಗೆ ಕಟ್ಟಿಲ್ಲ. ಜೊತೆಗೆ ಒನ್ ಟೈಮ್ ಸೆಟಲ್‌ಮೆಂಟ್ ಯೋಜನೆಯ ಗಡುವು ಸಹ ಮುಕ್ತಾಯಗೊಂಡಿದೆ. ಆದರೂ ತೆರಿಗೆ ಕಟ್ಟದವರಿಗೆ ಡಿಸೆಂಬರ್ 1ರಿಂದ ಬಡ್ಡಿ ಮತ್ತು ಆಸ್ತಿ ಹರಾಜು ಅಸ್ತ್ರ ಪ್ರಯೋಗಿಸಲು ಪಾಲಿಕೆ ಸಜ್ಜಾಗಿದೆ.
ಶೇ.60 ರಷ್ಟು ಜನರಿಂದ ತೆರಿಗೆ ಪಾವತಿ:ಈವರೆಗೆ ಬೆಂಗಳೂರು ನಗರದಲ್ಲಿ ಓಟಿಎಸ್ ಮೂಲಕ ಶೇ.60 ರಷ್ಟು ಜನರು ಮಾತ್ರ ತೆರಿಗೆ ಪಾವತಿಸಿದ್ದಾರೆ. ಅವಕಾಶ ನೀಡಿದರೂ ಕೂಡಾ ಶೇ.40 ರಷ್ಟು ಜನರು ತೆರಿಗೆ ಪಾವತಿಸಿಲ್ಲ. ಅಂತಹವರಿಗೆ ಇಂದಿನಿಂದ ದುಪ್ಪಟ್ಟು ದಂಡದ ಜತೆಗೆ ತೆರಿಗೆ ವಸೂಲಿ ಮಾಡಲು ಪಾಲಿಕೆ ಮುಂದಾಗಿದೆ. ಬಾಕಿ ತೆರಿಗೆಗೆ ಬಾಕಿ ಉಳಿಸಿಕೊಂಡಷ್ಟೇ ದಂಡವನ್ನು ಪಾಲಿಕೆ ವಿಧಿಸಲಿದೆ.