ಕರ್ನಾಟಕ

karnataka

ETV Bharat / state

ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಸಿಲಿಕಾನ್​ ಸಿಟಿಯಲ್ಲಿ ಅನಿರೀಕ್ಷಿತವಾಗಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಮ್ಮ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

TUSHAR VISITS RAIN DAMAGED AREAS
ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (ETV Bharat)

By ETV Bharat Karnataka Team

Published : Oct 16, 2024, 3:55 PM IST

Updated : Oct 16, 2024, 4:29 PM IST

ಬೆಂಗಳೂರು:ನಗರದಲ್ಲಿ ನಿನ್ನೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬುಧವಾರ ಯಲಹಂಕ ವಲಯದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖ್ಯವಾಗಿ ರಮಣಶ್ರೀ ಕ್ಯಾಲಿಫೋರ್ನಿಯಾ ಲೇಔಟ್, ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್​ಗಳಿಗೆ ಭೇಟಿ ನೀಡಿದರು.

ಪ್ರಸ್ತುತ ಸುಮಾರು 3 ಅಡಿ ನೀರು ನಿಂತಿದ್ದು, ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆ ಬಗೆಹರಿಸಬೇಕು. ಎಲ್ಲಾ ವಲಯಗಳ ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ನಾಗರೀಕರಿಂದ ಬರುವ ದೂರುಗಳಿಗೆ ಕೂಡಲೇ ಸ್ಪಂದಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (ETV Bharat)

ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದ್ಯ ಇರುವ ನೀರುಗಾಲುವೆಯ ಪಕ್ಕ ಖಾಸಗಿ ಜಾಗದಲ್ಲಿ ಹಿಟಾಚಿ ಮೂಲಕ ಕಚ್ಚಾ ಡ್ರೈನ್ ಮಾಡಲಾಗುತ್ತಿದ್ದು, ಕೂಡಲೇ ಕೆಲಸ ಮುಗಿಸಿ ಕಚ್ಚಾ ಡ್ರೈನ್ ಮೂಲಕ ನೀರು ಹರಿದು ಹೊಗುವಂತೆ ಮಾಡಲಾಗುತ್ತಿದೆ. ಎರಡು ಅಗ್ನಿ ಶಾಮಕ ವಾಹನಗಳಿಂದ ಪಂಪ್ ಮೂಲಕ ನೀರನ್ನು ಹೊರ ಹಾಕಲಾಗುತ್ತಿದೆ. ನಿನ್ನೆ ಸಂಜೆ ಸಹಾಯ ಕೇಂದ್ರ ತೆರೆಯಲಾಗಿದ್ದು, ನಿವಾಸಿಗಳಿಗಳಿಗೆ ಕುಡಿಯುವ ನೀರು, ಹಾಲು, ಬ್ರೆಡ್, ಬಿಸ್ಕೆಟ್ ಇನ್ನಿತರೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಳೆ ಹಾನಿ ಪ್ರದೇಶ (ETV Bharat)

ಅಪಾರ್ಟ್ಮೆಂಟ್​ನಿಂದ ನಿವಾಸಿಗಳು ಹೊರ ಬರಲು ಹಾಗೂ ಒಳ ಹೋಗಲು 2 ಟ್ರ್ಯಾಕ್ಟರ್​ಗಳ ವ್ಯವಸ್ಥೆ ಮಾಡಲಾಗಿದೆ. ಯಲಹಂಕ ಕೆರೆಗೆ ಎರಡು ಕೋಡಿಗಳಿದ್ದು, ಉತ್ತರ, ದಕ್ಷಿಣದಲ್ಲಿ ಕೋಡಿಗಳು ಬರಲಿದೆ. ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಕಡೆಗೆ ಉತ್ತರ ಕೋಡಿ ಇದೆ, ಅಲ್ಲಿ ನೀರಿನ ಹರಿವನ್ನು ಕಡಿಮೆ ಮಾಡಬೇಕಿದೆ. ಈ ಸಂಬಂಧ ದಕ್ಷಿಣದ ಕೋಡಿಯಲ್ಲಿ ನೀರಿನ‌ ಹರಿವಿನ ಮಟ್ಟ ಹೆಚ್ಚಿಸಿದಾಗ ಉತ್ತರದ ಕೋಡಿಯಲ್ಲಿ ನೀರಿನ ಹರಿವಿನ ಮಟ್ಟ ಕಡಿಮೆಯಾಗಲಿದೆ. ಆದ್ದರಿಂದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. 20ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದು, ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ರಮಣಶ್ರೀ ಕ್ಯಾಲಿಫೋರ್ನಿಯಾ ಲೇಔಟ್​ಗೆ ಬರುತ್ತಿರುವ ನೀರನ್ನು ತಡೆಯುವ ಸಲುವಾಗಿ ಹಿಂದೆಯೇ ಡೈವರ್ಷನ್ ಚಾನಲ್ ಮಾಡಲಾಗಿದ್ದು, ನೀರಿನ ಮಟ್ಟವನ್ನು ಸಾಕಷ್ಟು ತಡೆಯಲಾಗಿದೆ. ಲೇಔಟ್​ನಲ್ಲಿ ನಿಂತಿರುವ ನೀರನ್ನು ಪಂಪ್ ಮೂಲಕ ತೆರವುಗೊಳಿಸಲಾಗುತ್ತಿದೆ. ಇನ್ನಿತರ ಸಮಸ್ಯೆಯಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಮಳೆ ಹಾನಿ ಪ್ರದೇಶ (ETV Bharat)

ಈ ವೇಳೆ ವಲಯ ಆಯುಕ್ತ ಕರೀಗೌಡ, ವಲಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿಮ್, ಮುಖ್ಯ ಅಭಿಯಂತರ ರಂಗನಾಥ್, ಕಾರ್ಯಪಾಕಲಕ ಅಭಿಯಂತರ ಸುಧಾಕರ್ ರೆಡ್ಡಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ವರ್ಚುವಲ್ ಸಭೆ:ಮಳೆಯಾಗುತ್ತಿರುವ ಹಿನ್ನೆಲೆ ಇಂದು ಬೆಳಗ್ಗೆ ವರ್ಚುವಲ್ ಮೂಲಕ ಸಭೆ ಕೂಡ ನಡೆಸಿರುವ ತುಷಾರ್ ಗಿರಿನಾಥ್, ಆಯಾ ವಲಯ ವ್ಯಾಪ್ತಿಯಲ್ಲಿ ಸಮಸ್ಯೆಯಾಗಿರುವ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಸ್ಥಳದಲ್ಲಾಗಿರುವ ಸಮಸ್ಯೆ ಬಗ್ಗೆ ಅವಲೋಕಿಸಿ ಆ ಸ್ಥಳದಲ್ಲಿ ಶಾಶ್ವತ ಪರಿಹಾರ ಹುಡುಕಿ, ಇರುವ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ:ಮಳೆ ನೀರನ್ನು ವಾಪಸ್​ ಆಕಾಶಕ್ಕೆ ಕಳಿಸಲಾಗುವುದಿಲ್ಲ, ಭೂಮಿ ಮೇಲೆನೇ ಹರಿಯಬೇಕು: ಸಚಿವ ಜಿ.ಪರಮೇಶ್ವರ್

Last Updated : Oct 16, 2024, 4:29 PM IST

ABOUT THE AUTHOR

...view details