ಹಾವೇರಿ :ಹಾವೇರಿ ಜಿಲ್ಲೆಯ ಹೆಸರನ್ನು ರಾಷ್ಟ್ರ ರಾಜಕಾರಣಕ್ಕೆ ಕೊಂಡೊಯ್ಯಲು ಸರ್ವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಣೆಬೆನ್ನೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ ಅವರು, ನಾನು 12 ವರ್ಷ ಎಂಎಲ್ಸಿ ಯಾಗಿ ಕೆಲಸ ಮಾಡಿದ್ದೇನೆ. ಶಿಗ್ಗಾವಿ - ಸವಣೂರು ಶಾಸಕನಾಗಿದ್ದೇನೆ. ನನಗೆ ಈ ಕ್ಷೇತ್ರ ಹೊಸದೇನಲ್ಲ. ಹಾವೇರಿ - ಗದಗ ಲೋಕಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಶಿಗ್ಗಾಂವ್ ಜನರ ಪ್ರೀತಿ ವಿಶ್ವಾಸ ಮರೆಯಲ್ಲ. ಇದು ನನಗೆ ಹೊಸ ಜವಾಬ್ದಾರಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನನಗೆ ಜವಾಬ್ದಾರಿ ನೀಡಿದ್ದಾರೆ. ಹಾವೇರಿ ಕ್ಷೇತ್ರದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸುತ್ತೇನೆ ಎಂದು ತಿಳಿಸಿದರು.
ನಾನು ಹೊಂದಾಣಿಕೆ ರಾಜಕೀಯ ಮಾಡಲ್ಲ. ನಾನು ನನ್ನ ಶಕ್ತಿ ಮೇಲೆ, ಜನರ ಬೆಂಬಲದ ಮೇಲೆ ರಾಜಕಾರಣ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರದ ವಿರುದ್ದ ಜನ ಭ್ರಮ ನಿರಸನಗೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಪುಟಗಟ್ಟಲೆ ಜಾಹೀರಾತು ನೀಡುತ್ತಿದ್ದಾರೆ. ಕಳೆದ ವರ್ಷದಲ್ಲಿ ಅಭಿವೃದ್ಧಿ ಶೂನ್ಯ ಆಗಿದೆ. ಕುಡಿಯುವ ನೀರು ಕೊಡದೇ ಇರುವ ಸರ್ಕಾರ ಇದು. ಆಡಳಿತ ವಿರೋಧಿ ಅಲೆ ಕಾಂಗ್ರೆಸ್ಗೆ ಇದ್ದು, ನಮಗೆ ಆಡಳಿತದ ಪರ ಅಲೆ ಇದೆ. ಬರಗಾಲ ನಿಭಾಯಿಸಲು ವಿಫಲವಾದ ಕಾಂಗ್ರೆಸ್ ಸರ್ಕಾರದ ವಿರುದ್ದ ಉಗ್ರ ಹೋರಾಟ ಮಾಡಿ ಜನರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಬೊಮ್ಮಾಯಿ ಭರವಸೆ ನೀಡಿದರು.