ಕೂಡಲಸಂಗಮ ಪೀಠದ ಶ್ರೀ ಬಸವ ಜಯ ಮೃತ್ಯಂಜಯ ಸ್ವಾಮೀಜಿ (ETV Bharat) ಧಾರವಾಡ :ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುತ್ತಿನ ಹೋರಾಟಕ್ಕೆ ನಿರ್ಧರಿಸಲಾಗಿದೆ. ಈಗ ಮತ್ತೆ 18 ಜಿಲ್ಲೆಗಳಲ್ಲಿ ಶುರು ಮಾಡುತ್ತೇವೆ. ಉತ್ತರಕನ್ನಡ ಜಿಲ್ಲೆಯ ಉಳವಿಯಲ್ಲಿ ಮತ್ತೆ ಹೋರಾಟದ ಸಭೆ ಮಾಡಲಿದ್ದು, ಸಂಕಲ್ಪ ಸಭೆಯನ್ನು ಮೇ 23 ರಂದು ಮಧ್ಯಾಹ್ನ 3 ಗಂಟೆಗೆ ಆಯೋಜಿಸಲಾಗಿದೆ ಎಂದು ಕೂಡಲ ಸಂಗಮ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಧಾರವಾಡದ ಲಿಂಗಾಯತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷದಿಂದ ಪಂಚಮಸಾಲಿ ಮೀಸಲಾತಿ ಹೋರಾಟ ನಡೆದಿದೆ. ಈ ಸರ್ಕಾರ ಬಂದ ಮೇಲೂ ಹೋರಾಟ ಮುಂದುವರೆದಿದೆ. 12 ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡಿದ್ದೇವೆ. ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ ಮಾಡಿದ್ದೇವೆ. ಅದೊಂದು ವಿಭಿನ್ನ ಬಗೆಯ ಹೋರಾಟ. ಮಾರ್ಚ್ 12 ರಂದು ಕಲಬುರ್ಗಿಯಲ್ಲಿ ಹೋರಾಟ ಮಾಡಿದ್ದೆವು. ನೀತಿ ಸಂಹಿತೆ ಜಾರಿಯಾಯಿತು. ಹೀಗಾಗಿ, ಹೋರಾಟವನ್ನು ಸ್ಥಗಿತಗೊಳಿಸಲಾಯಿತು ಎಂದು ಸ್ಪಷ್ಟಪಡಿಸಿದರು.
ಸಭೆಯ ಮರುದಿನ ಬೆಳಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಕೂಡ ಏರ್ಪಡಿಸಲಾಗಿದೆ. ಎಲ್ಲರೂ ಸಭೆಗೆ ಬರುವಂತೆ ಮನವಿ ಮಾಡಿದರು. ಎರಡು ದಿನಗಳ ಕಾಲ ನಡೆಯುವ ಸಭೆಯಲ್ಲಿ ಮುಂದಿನ ಹೋರಾಟದ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಈ ಸಭೆಯಲ್ಲಿನ ಸಲಹೆ ಕೇಳಿ ಮುಂದಿನ ಹೆಜ್ಜೆ ಇಡಲಾಗುವುದು. ನೀತಿ ಸಂಹಿತೆ ಮುಗಿದ ಬಳಿಕ ಮತ್ತೊಂದು ಸಭೆ ಮಾಡಲಾಗುವುದು. ಜೂನ್ ತಿಂಗಳ ಕೊನೆಯ ವಾರದಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ಸಭೆ ಮಾಡಲಾಗುವುದು. ಈ ಸಭೆಯಲ್ಲಿ ಸಮಾಜದ ಶಾಸಕರು, ಸಂಸದರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೆಲ್ಲಲಿಕ್ಕಷ್ಟೇ ಪಂಚಮಸಾಲಿ ಸಮಾಜದ ಜನರನ್ನು ಬಳಸಿಕೊಳ್ಳಬೇಡಿ. ಸಮಾಜದ ಉದ್ಧಾರಕ್ಕೂ ನೀವು ಯತ್ನಿಸಿ. ನಮ್ಮ ಸಮಾಜದ ಎಲ್ಲ ಜನಪ್ರತಿನಿಧಿಗಳು ಮಾತನಾಡಬೇಕು. ಜೂನ್ ತಿಂಗಳಲ್ಲಿ ಮಳೆಗಾಲದ ಅಧಿವೇಶನ ನಡೆಯಬಹುದು. ಆಗ ನಮ್ಮ ಸಮಾಜದ ಎಲ್ಲ ಶಾಸಕರು ಮಾತನಾಡಬೇಕಿದೆ ಎಂದು ಒತ್ತಾಯಿಸಿದರು.
ಈಗಾಗಲೇ ಯತ್ನಾಳ್, ಬೆಲ್ಲದ್ ದನಿ ಎತ್ತಿದ್ದಾರೆ. ಅದೇ ರೀತಿಯಾಗಿ ಉಳಿದ ಶಾಸಕರು ದನಿ ಎತ್ತಬೇಕಿದೆ. ಪಕ್ಷ ಬೇಧ ಮರೆತು ಎಲ್ಲರೂ ದನಿ ಎತ್ತಬೇಕು. ಗುರಿ ಮುಟ್ಟೋವರೆಗೆ ಹೋರಾಟ ಮುಂದುವರೆಯುತ್ತದೆ. ಸರ್ಕಾರ, ಸಿಎಂ ಬದಲಾವಣೆ ಆಗಬಹುದು. ಆದರೆ ನಮ್ಮ ಗುರಿ ಮಾತ್ರ ಬದಲಾಗೋದಿಲ್ಲ. ಇದುವರೆಗೂ ನಾವು ಶಾಂತ ರೀತಿಯಲ್ಲಿ ಹೋರಾಟ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಅನ್ನೋದನ್ನು ಸಭೆಯಲ್ಲಿ ನಿರ್ಧರಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ :ಲೋಕಸಭೆ ಚುನಾವಣೆಗೆ ಮುನ್ನ ಮೀಸಲಾತಿ ಪ್ರಕಟಿಸಿದರೆ ಒಳ್ಳೆಯದು: ಬಸವ ಜಯಮೃತ್ಯುಂಜಯ ಶ್ರೀ