ಹುಬ್ಬಳ್ಳಿ: "ಜೆಡಿಎಸ್ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಹೆಚ್.ಡಿ. ಕುಮಾರಸ್ವಾಮಿ ಅವರು ಟಿಕೆಟ್ ತ್ಯಾಗ ಮಾಡಬೇಕು" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, "ಸಿ.ಪಿ. ಯೋಗೇಶ್ವರ್ಗೆ ಚನ್ನಪಟ್ಟಣ ಟಿಕೆಟ್ ವಿಚಾರವಾಗಿ ಹೆಚ್.ಡಿ. ಕುಮಾರಸ್ವಾಮಿ ಅವರ ಸಹಾಯ ನಮಗೆ ಬೇಕು. ನಮ್ಮ ಶಕ್ತಿ ಕುಮಾರಸ್ವಾಮಿ ಅವರಿಗೆ ಬೇಕು. ಕುಮಾರಸ್ವಾಮಿ ಬಂದಿರುವುದರಿಂದ ನಮಗೆ ಲೋಕಸಭೆಯಲ್ಲಿ ಅನುಕೂಲ ಆಗಿದೆ. ಜೆಡಿಎಸ್ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಎರಡು ಕಡೆಯವರಿಗೂ ಲಾಭ ಆಗಿದೆ. ಉಪಚುನಾವಣೆಯಲ್ಲಿ ಟಿಕೆಟ್ನ್ನು ನಮ್ಮ ಪಕ್ಷದ ಕಾರ್ಯಕರ್ತರಿಗೆ ಕೊಡಬೇಕು ಅನ್ನೋದು ಮುಖ್ಯ. ಹೆಚ್.ಡಿ. ಕುಮಾರಸ್ವಾಮಿ ಅವರು ಟಿಕೆಟ್ ತ್ಯಾಗ ಮಾಡಬೇಕು ಎಂದು ಮನವಿ ಮಾಡುತ್ತೇವೆ" ಎಂದರು.
ಶಿಗ್ಗಾಂವಿ ಟಿಕೆಟ್ ಬಸವರಾಜ್ ಬೊಮ್ಮಾಯಿ ಮಗನಿಗೆ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಬಸವರಾಜ ಬೊಮ್ಮಾಯಿ ಅವರನ್ನು ಯಾಕೆ ಎಳೆಯುತ್ತೀರಿ, ಅವರದ್ದೇನು ತಪ್ಪಿಲ್ಲ. ಕರ್ನಾಟಕದಲ್ಲಿ ನಂಬರ್ 1 ಇದ್ದವರಿಂದ ಇದು ಪಾಲನೆ ಆಗಬೇಕು. ಬೊಮ್ಮಾಯಿ ಅವರನ್ನು ಯಾಕೆ ಬಲಿ ಪಶು ಮಾಡುತ್ತೀರಿ? ಎಲ್ಲರಿಗೂ ಕೊಟ್ಟ ಮೇಲೆ ಅವರು ತಮ್ಮ ಮಗನಿಗೆ ಕೇಳಿದ್ದಾರೆ. ನಮ್ಮ ಪಕ್ಷದ ಹಿರಿಯರು ನಿರ್ಣಯ ಮಾಡುತ್ತಾರೆ" ಎಂದು ತಿಳಿಸಿದರು.