ಚಿಕ್ಕೋಡಿ (ಬೆಳಗಾವಿ):ಹಿಂದೂ ಎನ್ನುವ ಪದ ಅಶ್ಲೀಲ ಎಂದಿದ್ದವರು ಈಗ ಮಗಳು ಚುನಾವಣೆಗೆ ಸ್ವರ್ಧೆ ಮಾಡುತ್ತಿದ್ದಂತೆ ದೇವಸ್ಥಾನಕ್ಕೆ ಭೇಟಿ ಕೊಡುತ್ತಿದ್ದಾರೆ. ಮೊದಲೆಲ್ಲ ಸ್ಮಶಾನಕ್ಕೆ ಹೋಗಿ ಹೊಸ ಕಾರ್ ಪೂಜೆ ಮಾಡ್ತಿದ್ರು. ಈಗೀಗ ದೇವಸ್ಥಾನಗಳ ಕಡೆ ಮುಖ ಮಾಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಶಾಸಕ ಬಸವನಗೌಡ ಯತ್ನಾಳ್ ವಾಗ್ದಾಳಿ ನಡೆಸಿದರು.
ಚಿಕ್ಕೋಡಿಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಸಾಬ್ ಜೊಲ್ಲೆ ಪರವಾಗಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಎಷ್ಟು ದಿನ ಅಂತ ಸಾವಕಾರ್‌ಗೆ ಕೈ ಮುಗಿತೀರಾ, ನಿಮ್ಮಲ್ಲಿ ಸ್ವಾಭಿಮಾನ ಇಲ್ಲವಾ?, ಇನ್ಮುಂದೆ ಸಾವುಕಾರ್‌ನ ಬೆಕ್ಕು, ನಾಯಿಗಳಿಗೆ ಸಲಾಂ ಹೊಡೆಯಬೇಕಾಗುತ್ತದೆ. ಬೆಳಗಾವಿಯ ಎಲ್ಲ ಸಮಾಜದವರು ಎಂಎಲ್‌ಎ, ಎಂಪಿಗಳು ಆಗಬೇಕು. ಆದರೆ, ಮೀಸಲು ಕ್ಷೇತ್ರದಲ್ಲೂ ಕೂಡ ಸತೀಶ್ ಜಾರಕಿಹೊಳಿ ಅವರೇ ಸ್ಪರ್ಧೆ ಮಾಡಿದ್ದಾರೆ, ಜನರಲ್ ಇರುವ ಕ್ಷೇತ್ರದಲ್ಲೂ ಅವರ ಮಗಳನ್ನು ಸ್ಪರ್ಧೆಗಿಳಿಸಿದ್ದಾರೆ ಎಂದು ಯತ್ನಾಳ್ ಕಿಡಿಕಾರಿದರು.
ಹಿಂದುತ್ವ, ಸನಾತನ ಧರ್ಮ ಉಳಿಸಲು ಬಿಜೆಪಿಗೆ ಮತ ನೀಡಬೇಕು. ಯಾರೂ ಸಹ ಹೆದರುವ ಅವಶ್ಯಕತೆ ಇಲ್ಲ. ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ವಿಜಯಪುರಕ್ಕೆ 15 ಜನರನ್ನು ಜಾರಕಿಹೊಳಿ ಕಳಿಸಿದ್ದರು. ಜೊತೆಗೆ ನನ್ನನ್ನು ಸೋಲಿಸಲು ಅನೇಕ ಕಡೆಗಳಿಂದ ದುಡ್ಡು ಬಂತು. ಆದರೆ ನಾನು ನಿಮ್ಮ ಆಶೀರ್ವಾದದಿಂದ ಜಯಭೇರಿ ಬಾರಿಸಿದ್ದೇನೆ. ಅದೇ ರೀತಿಯಾಗಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಲು ಹಾಗೂ 2ನೇ ಬಾರಿಗೆ ಸಂಸದರಾಗಲು ಅಣ್ಣಸಾಬ್ ಜೊಲ್ಲೆ ಅವರಿಗೆ ಮತದಾನ ಮಾಡುವಂತೆ ಮನವಿ ಮಾಡಿದರು.