ಕರ್ನಾಟಕ

karnataka

ETV Bharat / state

ಯುದ್ಧೋಪಾದಿಯಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ಆಗಿದ್ದ ವ್ಯತ್ಯಯವನ್ನು ಸರಿಪಡಿಸಿದ ಜಲಮಂಡಳಿ - Cauvery water supply

ನೆಟ್ಟಕಲ್ಲಪ್ಪ ಬ್ಯಾಲೆನ್ಸ್‌ ರಿಸರ್ವಯರ್​​ನಿಂದ ಕಾವೇರಿ ನೀರು ಪೂರೈಕೆಯಾಗುವ ನಾಲೆಯ ಸ್ಕ್ರೀನ್‌ ರೈಲಿಂಗ್‌ನಲ್ಲಿ ಸಸ್ಯಗಳು ಸಿಕ್ಕಿಹಾಕಿಕೊಂಡ ಪರಿಣಾಮ 1000 ಎಂಎಲ್‌ಡಿಯಷ್ಟು ನೀರು ಕೊರತೆ ಆಗುತ್ತಿತ್ತು. ಜಲಮಂಡಳಿ ಸಿಬ್ಬಂದಿ ಬೆಂಗಳೂರು ನಗರಕ್ಕೆ ಎದುರಾಗಬಹುದಾಗಿದ್ದ ದೊಡ್ಡ ನೀರಿನ ಕೊರತೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದೆ.

plant trapped in the Cauvery water supply
ಕಾವೇರಿ ನೀರು ಸರಬರಾಜಿನಲ್ಲಿ ಸಿಕ್ಕಿಕೊಂಡಿದ್ದ ಸಸ್ಯ

By ETV Bharat Karnataka Team

Published : Mar 24, 2024, 8:23 PM IST

ಬೆಂಗಳೂರು:ನೀರಿನ ಕೊರತೆ ಬೆನ್ನಲ್ಲೇ ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಜಲಮಂಡಳಿ ಬೆಂಗಳೂರು ನಗರಕ್ಕೆ ಎದುರಾಗಬಹುದಾಗಿದ್ದ ದೊಡ್ಡ ನೀರಿನ ಕೊರತೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದೆ.

ನಾಲೆಗಳ ಪಾತ್ರದಲ್ಲಿ ಬೆಳೆದುಕೊಂಡಿರುವ ಜೊಂಡು (ನೀರಿನಲ್ಲಿ ಬೆಳೆಯುವ ಸಸ್ಯಗಳು) ನೆಟ್ಟಕಲ್ಲಪ್ಪ ಬ್ಯಾಲೆನ್ಸ್‌ ರಿಸರ್ವಯರ್‌ ನಿಂದ ಕಾವೇರಿ ನೀರು ಸರಬರಾಜು ಮಾಡುವ ನಾಲೆಯ ಸ್ಕ್ರೀನ್‌ ರೈಲಿಂಗ್‌ನಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ನೀರಿನ ಹರಿವಿನಲ್ಲಿ ತೊಂದರೆ ಎದುರಾಗಿತ್ತು.

ನಿನ್ನೆ ರಾತ್ರಿ ಏಕಾಏಕಿ ಬೀಸಿದ ಗಾಳಿಯ ಪರಿಣಾಮ ನೀರಿನ ಕಳೆ ಗಿಡಗಳು ನಾಲೆಯ ಪ್ರವೇಶದ ಹರಿವಿನಲ್ಲಿ ಸಿಕ್ಕಿಕೊಂಡು, ಬೆಂಗಳೂರಿಗೆ ನೀರು ಸರಬರಾಜು ಆಗುತ್ತಿದ್ದ ನೀರಿನ ಹರಿವನ್ನು ಶೇಕಡಾ 50ರಷ್ಟು ಇಳಿಸಿದ್ದವು. ಇದರ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಜಲಮಂಡಳಿ ಅಧ್ಯಕ್ಷರು ವಿಶೇಷ ತಂಡಕ್ಕೆ ದುರಸ್ತಿ ನಡೆಸುವಂತೆ ಸೂಚಿಸಿದ್ದರು. ಸಿಬ್ಬಂದಿ ಯುದ್ಧೋಪಾದಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಳೆಗಳಿಂದ ಆಗಿದ್ದ ಹರಿವಿನ ತಡೆಯನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿನ್ನೆ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯ ವರೆಗೆ ಮಧ್ಯೆರಾತ್ರಿಯಲ್ಲಿ ಕಾರ್ಯಾಚರಣೆ ಮಾಡಿರುವ ಸಿಬ್ಬಂದಿ ಆಗಿದ್ದ ತೊಂದರೆಯನ್ನು ಸರಿಪಡಿಸಿದ್ದಾರೆ. ಸರಿಯಾದ ಸಮಯದಲ್ಲಿ ಈ ತೊಂದರೆಯನ್ನು ನಿವಾರಿಸದೇ ಇದ್ದಲ್ಲಿ, ನಗರಕ್ಕೆ 1000 ಎಂಎಲ್‌ಡಿಯಷ್ಟು ನೀರು ಕೊರತೆ ಉಂಟಾಗುತ್ತಿತ್ತು. ಇದನ್ನು ಈಗ 100 ಎಂಎಲ್‌ಡಿಗೆ ಇಳಿಸಲಾಗಿದೆ. 100 ಎಂಎಲ್‌ಡಿ ಕೊರತೆಯಿಂದ ನಗರದ ಕೆಲವೇ ಭಾಗದಲ್ಲಿ ಇಂದು ಮತ್ತು ನಾಳೆ ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ.

ಆದರೆ, ನಗರದ ಬಹುತೇಕ ಪ್ರದೇಶಗಳಲ್ಲಿ ನೀರಿನ ಸರಬರಾಜ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ವ್ಯತ್ಯಯ ಆಗಿರುವ ಕಡೆಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುವುದು. ಆಕಸ್ಮಿಕವಾಗಿ ಆಗಿರುವ ತಾಂತ್ರಿಕ ತೊಂದರೆಯಿಂದ ಜನರಿಗೆ ಆಗಿರುವ ಅನಾನುಕೂಲಕ್ಕೆ ಜಲಮಂಡಳಿ ವಿಷಾದ ವ್ಯಕ್ತಪಡಿಸುತ್ತದೆ. ರಾತ್ರಿಯಲ್ಲಿ ಯುದ್ದೋಪಾದಿಯ ಕಾರ್ಯಾಚರಣೆ ನಡೆಸುವ ಮೂಲಕ ದೊಡ್ಡ ತೊಂದರೆಯನ್ನು ತಪ್ಪಿಸುವಲ್ಲಿ ಯಶಸ್ವಿ ಆಗಿದ್ದಾರೆ ಎಂದು ಜಲಮಂಡಳಿ ಅಧ್ಯಕ್ಷ ಡಾ ರಾಮ್‌ ಪ್ರಸಾತ್‌ ಮನೋಹರ್‌ ಅವರು ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

ಇದನ್ನೂಓದಿ:ದಾವಣಗೆರೆ: ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲವೆಂದು ಕಾಲುವೆಗಿಳಿದು ರೈತರಿಂದ ಪ್ರತಿಭಟನೆ - farmers protest

ABOUT THE AUTHOR

...view details