ಬೆಂಗಳೂರು:ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳನ್ನು ಸಮಾನತೆ ದೃಷ್ಟಿಯಲ್ಲಿ ಕಾಣಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದು, ಕೇಂದ್ರ ಬಿಜೆಪಿ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದ ಡಿ ಕೆ ಸುರೇಶ್ ಅವರು ಪ್ರತ್ಯೇಕ ರಾಷ್ಟ್ರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ತೆರಿಗೆ ಇರಬಹುದು, ಬರಗಾಲ ಇರಬಹುದು, ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ತೆರಿಗೆ ಹಂಚಿಕೆಯಲ್ಲಿಯೂ ತಾರತಮ್ಯ ನೀತಿ ಅನುಸರಿಸಿದರೆ ಹೇಗೆ ಎಂದು ಪ್ರಶ್ನಿಸಿರುವ ಅವರು ತಾರತಮ್ಯವಾದಾಗ ಸ್ವಾಭಾವಿಕವಾಗಿ ಪ್ರತಿಭಟನೆ ಮಾಡ್ತಾರೆ ಎಂದಿದ್ದಾರೆ.
ಬರ ಪರಿಹಾರ ನಿಧಿಗೆ ಕರ್ನಾಟಕ ಮನವಿ ಸಲ್ಲಿಸಿ ತಿಂಗಳುಗಳು ಕಳೆದರೂ ಇನ್ನೂ ಬಿಡುಗಡೆಯಾಗಿಲ್ಲ. ಮಳೆಗಾಲದಲ್ಲಿ ಪ್ರವಾಹದಂತಹ ಸ್ಥಿತಿ ಕರ್ನಾಟಕದಲ್ಲಿ ಬಂದಾಗಲೂ ಪರಿಹಾರಕ್ಕೆ ಕೇಂದ್ರದಿಂದ ಹಣ ಬಿಡುಗಡೆಯಾಗಿರಲಿಲ್ಲ. ರಾಜ್ಯಕ್ಕೆ ಅನ್ಯಾಯ ಆಗಿದ್ದರಿಂದ ಈ ಎಲ್ಲ ಅಂಶಗಳ ಆಧಾರವಾಗಿಟ್ಟುಕೊಂಡೇ ಸಂಸದ ಡಿ ಕೆ ಸುರೇಶ ಈ ಮಾತು ಹೇಳಿದ್ದಾರೆ. ಆ ರೀತಿ ಆಗದಂತೆ ನೋಡಿಕೊಳ್ಳುವುದು ಕೇಂದ್ರದವರಿಗೆ ಬಿಟ್ಟಿರುವ ವಿಚಾರ ಎಂದು ತಿರುಗೇಟು ನೀಡಿದರು.
ಸಿಎಂ ಡಿನ್ನರ್ ಮೀಟಿಂಗ್ ಕುರಿತು ಮಾತನಾಡಿದ ಅವರು, ನಾಲ್ಕು ತಿಂಗಳ ಹಿಂದೆ ಊಟಕ್ಕೆ ಕರೆದಿದ್ದರು. ಲೋಕಸಭೆ ಅಭ್ಯರ್ಥಿಗಳ ಹೆಸರು ಕೊಡಬೇಕು. ಉಸ್ತುವಾರಿ ಜಿಲ್ಲೆ ಹಾಗೂ ತಮ್ಮ ಜಿಲ್ಲೆಯ ಹೆಸರು ಸಹ ಸಚಿವರು ಕೊಡಬೇಕು ಎಂದು ಸೂಚಿಸಿದ್ದರು. ನಿನ್ನೆ ಸಭೆಯಲ್ಲಿ ಅಭ್ಯರ್ಥಿಗಳ ಹೆಸರು ಕೊಡಲಾಗಿದೆ. 15 ಕ್ಷೇತ್ರಗಳಲ್ಲಿ ಸಿಂಗಲ್ ನೇಮ್ ಇವೆ. ಆದ್ದರಿಂದ ಸಿಂಗಲ್ ನೇಮ್ ಘೋಷಣೆ ಮಾಡ್ತಾರೆ. ಚಿಕ್ಕೋಡಿ ಹೆಸರುಗಳು ಶಿಫಾರಸು ಆಗಿವೆ. ಅಂತಿಮವಾಗಿ ಸಿಎಂ, ಡಿಸಿಎಂ ನಿರ್ಧಾರ ಮಾಡ್ತಾರೆ ಎಂದು ತಿಳಿಸಿದರು.
ಬಿ.ಶಿವರಾಮ್ ಶೇ 50ರಷ್ಟು ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದನ್ನು ಹೇಳಿದವರೇ ಎಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದನ್ನು ಸಾಬೀತು ಮಾಡಬೇಕು ಅಷ್ಟೇ, ಬರೀ ಆರೋಪ ಮಾಡುವುದು ಸಮಂಜಸವಲ್ಲ. ಭ್ರಷ್ಟಾಚಾರ ತಡೆಗೆ ಸಿದ್ಧರಾಮಯ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ನಿಗಮ ಮಂಡಳಿ ನೇಮಕ ವಿಚಾರ ಕುರಿತು ಮಾತನಾಡಿದ ಅವರು, ನಿಗಮ ಮಂಡಳಿ ನೇಮಕದಲ್ಲಿ ಅದು ಸೀನಿಯರ್ ಇರೋರಿಗೆ ಮೊದಲು ಕೊಟ್ಟಿದ್ದಾರೆ. ಉಳಿದವರಿಗೂ ಸಮಾಧಾನ ಆಗಿದೆ. ಯಾರಿಗೂ ಅಸಮಾಧಾನ ಇಲ್ಲ. ಕಾರ್ಯಕರ್ತರಿಗೆ ನಿಗಮ ನೀಡುವುದರಲ್ಲಿ ಗೊಂದಲ ಇಲ್ಲ. ಎಲ್ಲರಿಗೂ ಸಮಾನತೆ ತರೋಕ್ಕೆ ಆಗಲ್ಲ. ಒಂದೆರಡು ಜಿಲ್ಲೆಗಳಿಗೆ ಹಿನ್ನಡೆ ಆಗುತ್ತೆ. ಅದು ಸ್ವಾಭಾವಿಕ ಎಂದು ತಿಳಿಸಿದರು.
ಇದನ್ನೂಓದಿ:ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ ನೇತೃತ್ವದ ನಿಯೋಗ