ರಾಮನಗರ:ವಿಧಾನಪರಿಷತ್ಪದವೀಧರ ಚುನಾವಣೆ ರಣಕಣ ರಂಗೇರುತ್ತಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಅ.ದೇವೆಗೌಡ ಹಾಗೂ ಕಾಂಗ್ರೆಸ್ನಿಂದ 3ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದ ರಾಮೋಜಿಗೌಡ ಅವರು ಕಣದಲ್ಲಿದ್ದು, ಭರ್ಜರಿ ಪೈಪೋಟಿ ಏರ್ಪಟ್ಟಿದೆ ? ಲೋಕಸಭಾ ಚುನಾವಣೆ ಬೆನ್ನಲೆ ಈಗ ವಿಧಾನ ಪರಿಷತ್ ಚುನಾವಣೆ ಕಣ ರಂಗು ಪಡೆದುಕೊಳ್ಳುತ್ತಿದೆ. ಬಿಜೆಪಿ - ಜೆಡಿಎಸ್ ಒಟ್ಟಾಗಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಲೋಕಸಭೆ ಮಾದರಿಯಲ್ಲಿ ಏಕಾಂಗಿ ಹೋರಾಟಕ್ಕೆ ಸಜ್ಜುಗೊಂಡಿದೆ.
ಪದವೀಧರರ ಕ್ಷೇತ್ರದ ಚುನಾವಣೆ:ಒಂದು ಚುನಾವಣೆ ಮುಗಿಸಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದ ರಾಜಕೀಯ ಪಕ್ಷದ ಕಾರ್ಯಕರ್ತರು ಇದೀಗ ಪದವೀಧರ ಕ್ಷೇತ್ರದ ಚುನಾವಣೆಗೆ ಸಜ್ಜಾಗಿದ್ದಾರೆ. ಈ ಚುನಾವಣೆಯಲ್ಲಿ ಮತದಾರರ ಸಂಖ್ಯೆ ತೀರ ವಿರಳವಾಗಿದ್ದರೂ, ಮತದಾರರೆಲ್ಲ ಪದವೀಧರರೇ ಆಗಿದ್ದಾರೆ. ಆಮಿಷಗಳಿಗಿಂತ ಹೆಚ್ಚಾಗಿ ವರ್ಚಸ್ಸು, ಕೆಲಸಗಳಷ್ಟೇ ವರ್ಕ್ ಆಗಲಿವೆ. ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಮಹೂರ್ತ ನಿಗದಿಯಾಗಿದ್ದು, ಜೂ.3 ರಂದು ಮತದಾನ ನಡೆಯಲಿದೆ. ಜೂ.6 ರಂದು ಮತ ಏಣಿಕೆ ನಡೆಯಲಿದೆ. ಪದವೀಧರ ಕ್ಷೇತ್ರ ಗೆಲ್ಲಲು ರಾಜಕೀಯ ಪಕ್ಷಗಳು ಇದೀಗ ತಯಾರಿ ಆರಂಭಿಸಿವೆ.
ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಮೈತ್ರಿ ಪಕ್ಷದ ನಡುವೆ ಮಾತುಕತೆ ನಡೆದಿದೆ. ಶಿಕ್ಷಕರ ಕ್ಷೇತ್ರ ಜೆಡಿಎಸ್‌ಗೆ, ಪದವೀಧರ ಕ್ಷೇತ್ರ ಬಿಜೆಪಿಗೆ ಹಂಚಿಕೆಯಾಗಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ವು ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಈ ಎರಡು ಪಕ್ಷಗಳು ಮೈತ್ರಿಯಾದ ಬಳಿಕ ಎದುರಿಸುತ್ತಿರುವ 3ನೇ ಚುನಾವಣೆ ಇದಾಗಿದೆ. ಈಗಾಗಲೇ ಮೈತ್ರಿ ಪಕ್ಷಗಳು ಬೆಂಗಳೂರು ಶಿಕ್ಷಕರ ಕ್ಷೇತ್ರ, ಪದವೀಧರ ಚುನಾವಣೆಗೆ ಸಜ್ಜಾಗಿವೆ.
ಬೆಂಗಳೂರು ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ರಾಮೋಜಿ ಗೌಡ ಅವರ ಹೆಸರನ್ನು ಕಾಂಗ್ರೆಸ್ ಪಕ್ಷ ಕೆಲ ತಿಂಗಳ ಹಿಂದೆಯೇ ಘೋಷಣೆ ಮಾಡಿದೆ. ಈಗಾಗಲೇ ಕ್ಷೇತ್ರದಲ್ಲಿ ರಾಮೋಜಿಗೌಡ ಬಿರುಸಿನ ಪ್ರಚಾರದಲ್ಲಿ ನಿರತವಾಗಿದ್ದಾರೆ. 2012 ಮತ್ತು 2018 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಿತರಾಗಿದ್ದ ರಾಮೋಜಿಗೌಡ ಇದೀಗ ಮೂರನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಸಾಕಷ್ಟು ಸ್ಪರ್ಧೆಯೊಡ್ಡಿದ್ದರಾದರೂ ಬಿಜೆಪಿಯ ಅ ದೇವೇಗೌಡ ಗೆಲುವು ಸಾಧಿಸಿದ್ದರು. 2012 ರಲ್ಲಿ ರಾಮೋಜಿಗೌಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು.