ಉಡುಪಿ: ಶ್ರೀಕೃಷ್ಣ ಮಠವೆಂದರೆ ಅನ್ನ ಬ್ರಹ್ಮನ ಆರಾಧನೆ ನಡೆಯುವ ಕ್ಷೇತ್ರ. ಇಲ್ಲಿ ಪ್ರತೀದಿನ ನಡೆಸುವ ಅನ್ನ ಸಂತರ್ಪಣೆಗೆ ವಿಶೇಷ ಮನ್ನಣೆ ಇದೆ. ಹಾಗಾಗಿ, ಮಠದಲ್ಲಿ ನಡೆಯುವ ಪ್ರತಿಯೊಂದು ಆಚರಣೆಯೂ ಅನ್ನದಾನ ಚಟುವಟಿಕೆಗೆ ಪೂರಕವಾಗಿರುತ್ತದೆ. 2026ರಲ್ಲಿ ನಡೆಯಲಿರುವ ಶಿರೂರು ಮಠದ ಪರ್ಯಾಯಕ್ಕೆ ಬಾಳೆ ಮುಹೂರ್ತ ನಡೆಸುವ ಮೂಲಕ ಇಂದು ಅನ್ನಬ್ರಹ್ಮನ ಸೇವೆಗೆ ಚಾಲನೆ ನೀಡಲಾಯಿತು.
ಉಡುಪಿ ಕೃಷ್ಣನ ಆರಾಧನೆಗೆ ಎಂಟು ಮಠಾಧೀಶರು ಕಳೆದ 8 ಶತಮಾನದ ಹಿಂದೆ ನಿಯೋಜಿತರಾಗಿದ್ದಾರೆ. ಅಷ್ಟಮಠಗಳ ಪರಂಪರೆಯಲ್ಲಿ ನಾನಾ ಯತಿಗಳು ಕೃಷ್ಣನ ಪೂಜೆ ಮಾಡುತ್ತಾ ಬಂದಿದ್ದಾರೆ. ಸದ್ಯ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವ ನಡೆಯುತ್ತಿದ್ದು, 2026ರ ಜನವರಿ ತಿಂಗಳಲ್ಲಿ ಶಿರೂರು ಮಠ ಶ್ರೀಕೃಷ್ಣ ಪೂಜಾಧಿಕಾರವನ್ನು ಪಡೆಯುತ್ತದೆ.
ಮೊದಲ ಬಾಳೆ ಮುಹೂರ್ತ: ಶಿರೂರು ಪರ್ಯಾಯಕ್ಕೆ ಪೂರ್ವಭಾವಿಯಾಗಿ ನಡೆಯುವ ಮೊಟ್ಟಮೊದಲ ಬಾಳೆ ಮುಹೂರ್ತ ಇಂದು ನಡೆಯಿತು. ಅನ್ನದಾಸೋಹಕ್ಕೆ ಬೇಕಾದ ಪ್ರತಿಯೊಂದು ವಸ್ತುಗಳ ಜೋಡಣೆ ಮಾಡುವುದು ಈ ಪೂರ್ವಭಾವಿ ಮುಹೂರ್ತಗಳ ಉದ್ದೇಶ. ಇಂದಿನ ಬಾಳೆ ಮುಹೂರ್ತದಲ್ಲಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಉಪಸ್ಥಿತರಿದ್ದು, ಪರ್ಯಾಯದ ಯಶಸ್ವಿಗೆ ವಿಶೇಷ ಪ್ರಾರ್ಥನೆ ಮಾಡಿದರು. ಮಠದ ಭಕ್ತರ ಜೊತೆಗೂಡಿ ಮೆರವಣಿಗೆಯಲ್ಲಿ ತೆರಳಿ ಪೂರ್ಣಪ್ರಜ್ಞ ಕಾಲೇಜು ಆವರಣದ ಮಠದ ಜಾಗದಲ್ಲಿ ಬಾಳೆ ಗಿಡಗಳನ್ನು ನೆಟ್ಟರು. ಮುಂದಿನ ಒಂದು ವರ್ಷಗಳ ಕಾಲ ಇಲ್ಲಿನ ಬಾಳೆ ತೋಟದಲ್ಲಿ ಸಂಗ್ರಹವಾಗುವ ಎಲೆ ಹಾಗೂ ಫಲ ವಸ್ತುಗಳನ್ನು ಪರ್ಯಾಯ ಸಂದರ್ಭದಲ್ಲಿ ಅನ್ನದಾಸೋಹಕ್ಕೆ ಬಳಸುವುದು ಪ್ರತೀತಿ.