ಬಾಗಲಕೋಟ: ಬಾಗಲಕೋಟೆ ಕ್ಷೇತ್ರದಿಂದ 5ನೇ ಬಾರಿ ವಿಜಯ ಪತಾಕೆ ಹಾರಿಸಲು ಸಜ್ಜಾಗಿರುವ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರಿಗೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ ಪ್ರತಿಸ್ಪರ್ಧಿ. ಕಳೆದ ಚುನಾವಣೆಗಳಲ್ಲಿ ಅನಾಯಾಸದ ಜಯ ಸಾಧಿಸಿರುವ ಗದ್ದಿಗೌಡರಗೆ ಈ ಬಾರಿ ಕೈ ಅಭ್ಯರ್ಥಿ ಪೈಪೋಟಿ ನೀಡಲಿದ್ದಾರೆ ಎಂಬ ಮಾತುಗಳಿವೆ.
ಐದನೇ ಬಾರಿ ಗೆದ್ದು ದಾಖಲೆ ನಿರ್ಮಿಸುವ ನಿರೀಕ್ಷೆಯಲ್ಲಿ ಗದ್ದಿಗೌಡರ ಈ ಬಾರಿ ಅಬ್ಬರದ ಪ್ರಚಾರ ಮಾಡಿದ್ದರು. ಲಿಂಗಾಯತ ಗಾಣಿಗ ಸಮುದಾಯದ ಇವರು ಎಲ್ಲ ಪಕ್ಷಗಳ ನಾಯಕರ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ. ದ್ವೇಷ ರಾಜಕಾರಣ ಮಾಡದ ಹಾಗೂ ಯಾರ ವಿರುದ್ಧವೂ ಮಾತನಾಡದ ಇವರಿಗೆ ಬೇರೆ ಪಕ್ಷಗಳ ಕೆಲವು ನಾಯಕರ ಬೆಂಬಲವೂ ಇದೆ ಎನ್ನಲಾಗುತ್ತಿದೆ.
ಲಿಂಗಾಯತ ಗಾಣಿಗ ಸಮಾಜದವರು ಈ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಅಲ್ಲವಾದರೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜಕೀಯವಾಗಿ ಪ್ರಭಾವ ಬೀರಿದ್ದಾರೆ. ಈ ಸಮುದಾಯದವರು ಯಾವುದೇ ಪಕ್ಷದಲ್ಲಿ ದ್ದರೂ ಗದ್ದಿಗೌಡರ ಪರ ಒಗ್ಗಟ್ಟಿನ ಪ್ರದರ್ಶನ ಮಾಡುತ್ತಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಈ ಬಾರಿ ಕ್ಷೇತ್ರದಲ್ಲಿ ಶೇ 70.1ರಷ್ಟು ಮತದಾನವಾಗಿದೆ. 2019ರಲ್ಲಿ ಇಲ್ಲಿ ಶೇ.70.69ರಷ್ಟು ಮತದಾನವಾಗಿತ್ತು.
ಜಿಲ್ಲೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಪ್ರಬಲವಾಗಿದ್ದರಿಂದ ಅದೇ ಸಮುದಾಯದ ಸಂಯುಕ್ತಾ ಪಾಟೀಲ್ ಕಣದಲ್ಲಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಕುರುಬರು, ಅಲ್ಪಸಂಖ್ಯಾತರು, ಎಸ್ಸಿ ಎಸ್ಟಿ ಮತದಾರರು ನಿರ್ಣಾಯಕರಾಗಿದ್ದು, ಪಕ್ಷವನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಅಲ್ಲದೇ 8 ಲೋಕಸಭಾ ಕ್ಷೇತ್ರದಲ್ಲಿ ಐವರು ಕಾಂಗ್ರೆಸ್ ಪಕ್ಷದ ಶಾಸಕರಿರುವುದು ಪಕ್ಷಕ್ಕೆ ಪ್ಲಸ್ ಆಗಿದೆ.