ಬೆಳಗಾವಿ: "ಸಿಎಂ ಸಿದ್ದರಾಮಯ್ಯ ಕೇರಳ ಸಿಎಂ? ಅಥವಾ ಕನ್ನಡಿಗರ ಸಿಎಂ? ಎಂಬ ಬಗ್ಗೆ ರಾಜ್ಯದ ಜನರಿಗೆ ಅನುಮಾನ ಮೂಡಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಕೇರಳ ಸಿಎಂಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಮಳೆಗೆ ನಮ್ಮ ರಾಜ್ಯದಲ್ಲಿ ಅನೇಕ ಬಡವರು ಮನೆ ಕಳೆದುಕೊಂಡಿದ್ದಾರೆ. ಅವರಿಗೆ 1 ಲಕ್ಷ ರೂ. ಪರಿಹಾರವನ್ನೂ ಕೊಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಗಾಂಧಿ ಕುಟುಂಬವನ್ನು ಖುಷಿ ಪಡಿಸಲು, ಕೇರಳ ರಾಜ್ಯದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ಖುಷಿ ಪಡಿಸಲು ಅಲ್ಲಿ ಬಡವರಿಗೆ ಮನೆ ಕಟ್ಟಿಸುವುದಾಗಿ ಹೇಳಿದ್ದಾರೆ" ಎಂದು ಕಿಡಿ ಕಾರಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (ETV Bharat) "ಇದರ ಜೊತೆಗೆ ಕೇರಳ ಉಪಚುನಾವಣೆ ಪ್ರಚಾರದ ವೇಳೆ ಡಿಸಿಎಂ ಡಿಕೆಶಿ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡುವುದಾಗಿ ಹೇಳಿಕೆ ನೀಡಿದ್ದರು. ಇದು ಸರಿಯಲ್ಲ. ಸುಪ್ರೀಂ ಕೋರ್ಟ್ನಲ್ಲಿ ಈ ಬಗ್ಗೆ ತೀರ್ಮಾನ ಆಗಿದೆ. ಸಿಎಂ ಹಾಗೂ ಡಿಸಿಎಂ ರಾಜ್ಯದ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಈ ವಿಚಾರವನ್ನೂ ಸದನದಲ್ಲಿ ಪ್ರಸ್ತಾಪಿಸುತ್ತೇವೆ. ಈ ಬಗ್ಗೆ ಪತ್ರವನ್ನೂ ಬರೆಯುತ್ತಿದ್ದೇನೆ" ಎಂದರು.
"ಸಿಎಂ ಸಿದ್ದರಾಮಯ್ಯ ಅಧಿಕಾರದ ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ. ಮೀಸಲಾತಿ ಹೋರಾಟ ಕೈಗೊಂಡಾಗ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲು ಏನು ದಾಡಿಯಾಗಿತ್ತು. ಪ್ರತಿಭಟನಾಕಾರರ ಬಳಿ ಹತ್ತು ಹೆಜ್ಜೆ ಹೋಗಿ ಭೇಟಿ ಮಾಡಲು ಏಕೆ ಆಗಿಲ್ಲ? ಸಿಎಂ ಇಲ್ಲೇ ಸುವರ್ಣಸೌಧದಲ್ಲಿ ಇದ್ದಗಾಲೂ ಸ್ವಾಮೀಜಿಯನ್ನು ಭೇಟಿಯಾಗುವ ವ್ಯವದಾನ ತೋರಿಲ್ಲ. ಸರ್ಕಾರ ಚೆನ್ನಮ್ಮನ ನಾಡಿನಲ್ಲಿ ರಕ್ತ ಹರಿಸುವ ಕೆಲಸ ಮಾಡಿದೆ. ಯಾವ ಕಾರಣಕ್ಕೆ ಲಾಠಿ ಪ್ರಹಾರ ಮಾಡಿದೆ. ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಅಮಾಯಕರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. 138 ಶಾಸಕರು ಇದ್ದೇವೆ. ಮುಂದೆ ನಾವೇ ಅಧಿಕಾರದಲ್ಲಿ ಇರುತ್ತೇವೆ ಎಂಬ ಭ್ರಮೆಯಲ್ಲಿ ಈ ರೀತಿ ಮಾಡುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಅಧಿವೇಶನದ ಮೊದಲ ದಿನವೇ ವಕ್ಫ್, ಪಂಚಮಸಾಲಿ ಮೀಸಲಾತಿ ಸದ್ದು; ಸದನದಲ್ಲಿ ಮಾತಿನ ಚಕಮಕಿ, ಗದ್ದಲ