ಉಡುಪಿ: "ಸಂಡೂರು, ಶಿಗ್ಗಾವಿ, ಚನ್ನಪಟ್ಟಣ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಚನ್ನಪಟ್ಟಣಕ್ಕೆ ಅಭ್ಯರ್ಥಿ ಯಾರಾಗಬೇಕೆಂದು ನಾಳೆ ಕೇಂದ್ರದ ವರಿಷ್ಠರು ತೀರ್ಮಾನಿಸುತ್ತಾರೆ. ಸಂಡೂರು ಮತ್ತು ಶಿಗ್ಗಾವಿ ಬಗ್ಗೆ ಇವತ್ತು ರಾತ್ರಿ ಚರ್ಚಿಸುತ್ತೇವೆ. ನಾಳೆ ಅಥವಾ ನಾಡಿದ್ದು ಈ ಬಗ್ಗೆ ಅಂತಿಮ ತೀರ್ಮಾನವಾಗುತ್ತದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಉಡುಪಿಯಲ್ಲಿಂದು ಬಿಜೆಪಿ ಆಯೋಜಿಸಿದ್ದ ಜನಪ್ರತಿನಿಧಿ ಸಮಾವೇಶದಲ್ಲಿ ರಾಜ್ಯದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿರುವ ಬಗ್ಗೆ ಮಾತನಾಡಿದ ಅವರು, "ಮೂರೂ ಕ್ಷೇತ್ರ ಗೆಲ್ಲುವುದು ನಮ್ಮ ಮುಖ್ಯ ಗುರಿ. ಇದಕ್ಕಾಗಿ ಕಾರ್ಯಕರ್ತರು ಸಜ್ಜಾಗಿದ್ದಾರೆ" ಎಂದರು.
ಬಿ.ವೈ.ವಿಜಯೇಂದ್ರ (ETV Bharat) "ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಂದೋಲನ ಮಾಡಿದ್ದೇವೆ. ಅಭಿವೃದ್ಧಿ ಶೂನ್ಯ ಸರ್ಕಾರದ ವಿರುದ್ಧ ಜನ ಆಕ್ರೋಶಿತರಾಗಿದ್ದಾರೆ. ಇದರ ಪರಿಣಾಮ ಮೂರೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಮತದಾರರು ನಮಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ" ಎಂದು ತಿಳಿಸಿದರು.
"ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಗಳ ರೇಸ್ನಲ್ಲಿ ಇರುವವರ ಪಟ್ಟಿ ದೊಡ್ಡದಿದೆ. ಸದ್ಯದಲ್ಲೇ ಯಾರ‍್ಯಾರಿದ್ದಾರೆ ಅನ್ನೋದು ಬಹಿರಂಗವಾಗಲಿದೆ. ಭ್ರಷ್ಟಾಚಾರದ ಸುಳಿಯಲ್ಲಿ ಸಿಕ್ಕ ಸಿದ್ದರಾಮಯ್ಯ ರಾಜೀನಾಮೆ ಕೊಡಲೇ ಬೇಕಾದ ಸಂದರ್ಭ ಬಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ಅನೇಕ ಹಿರಿಯರು ಕಾಯುತ್ತಿದ್ದಾರೆ" ಎಂದು ಇದೇ ವೇಳೆ ಬಿವೈವಿ ಟೀಕಿಸಿದರು.
ಇದನ್ನೂ ಓದಿ:ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮುಹೂರ್ತ ಫಿಕ್ಸ್