ಮಳೆ ಹಾನಿ ಪರಿಹಾರ ಹೆಚ್ಚಿಸುವಂತೆ ಆಗ್ರಹಿಸಿದ ಬಿಜೆಪಿ ಶಾಸಕ ಬಿ ವೈ ವಿಜಯೇಂದ್ರ (ETV Bharat) ಬೆಂಗಳೂರು : ರಾಜ್ಯದಲ್ಲಿ ಭಾರಿ ಮಳೆಯಿಂದ ಉಂಟಾಗಿರುವ ಮನೆ ಕುಸಿತ, ಗುಡ್ಡ ಕುಸಿತ, ರಸ್ತೆ ಹಾನಿ ಮೊದಲಾದ ವಿಚಾರಗಳು ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿದವು.
ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಬಿ. ವೈ ವಿಜಯೇಂದ್ರ ಅವರು ವಿಷಯ ಪ್ರಸ್ತಾಪಿಸಿ, ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮನೆಕುಸಿತ, ಗೋಡೆ ಕುಸಿತವಾಗಿದೆ. ಅಂಕೋಲಾದ ಬಳಿ ಗುಡ್ಡ ಕುಸಿತವಾಗಿದೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನೆರೆ ಹಾನಿ ಸಂಬಂಧ, ಮನೆ ಕುಸಿತಕ್ಕೆ ಸಂಬಂಧಿಸಿ ಬಿಜೆಪಿ ಸರ್ಕಾರ ಕೊಟ್ಟ ಮಾದರಿಯಲ್ಲಿ ಒಂದು ಲಕ್ಷದ ಬದಲು 5 ಲಕ್ಷ ರೂ. ಕೊಡಬೇಕು. ಗೋಡೆ ಕುಸಿತಕ್ಕೆ ಎನ್ಡಿಆರ್ಎಫ್ ನಿಯಮದ 40 ಸಾವಿರ ಬದಲಾಗಿ 1 ಲಕ್ಷ ಕೊಡಿ ಎಂದು ಆಗ್ರಹಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, ಮಳೆಯಿಂದ ಗುಡ್ಡಕುಸಿತವಾಗುತ್ತಿದೆ. ಅಲ್ಲಿ ಸಿಲುಕಿರುವ ಟ್ರಕ್ ಅನ್ನು ಇನ್ನೂ ತೆಗೆಯಲಾಗಲಿಲ್ಲ, ಸೇನಾ ಕಾರ್ಯಾಚರಣೆ ಮಾಡಲಾಗಿದೆ. ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡಿದ್ದರು. ಕೇಂದ್ರ ನೆರವು ಬಳಸಿಕೊಳ್ಳಿ ಎಂದರು.
ಬಿಜೆಪಿ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಸಕಲೇಶಪುರದಲ್ಲಿ 50 ಮನೆಗಳು ಹಾಳಾಗಿವೆ. ಕಾಫಿ ತೋಟ, ಗದ್ದೆಗಳಿಗೂ ಹಾನಿಯಾಗಿದೆ. ಮಳೆ ಹಾನಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಎಂದರು. ಬಿಜೆಪಿ ಶಾಸಕ ಸಿದ್ದು ಸವದಿ ಸೇರಿದಂತೆ ಹಲವು ಮಂದಿ ಶಾಸಕರು ಈ ವಿಚಾರದ ಬಗ್ಗೆ ಪ್ರಸ್ತಾಪಿಸಿದರು.
ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಮಾತನಾಡಿ, ಅತಿವೃಷ್ಟಿ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಕೊಡಗು, ಚಿಕ್ಕಮಗಳೂರು, ಬೆಳಗಾವಿ, ಶಿವಮೊಗ್ಗ, ಕರಾವಳಿ, ಸಕಲೇಶಪುರ ಭಾಗಗಳಲ್ಲಿ ಸಾಕಷ್ಟು ಹಾನಿಯಾಗಿವೆ. ಈ ಬಗ್ಗೆ ಸದನಕ್ಕೆ ವಿಸ್ತೃತ ವರದಿ ಪಡೆದು ಉತ್ತರ ನೀಡುವುದಾಗಿ ಹೇಳಿದರು.
ಅನುದಾನ ಹಂಚಿಕೆಯಲ್ಲಿ ರಾಜಕೀಯ ತಾರತಮ್ಯ:ಲೋಕೋಪಯೋಗಿ ಇಲಾಖೆ ಅಡಿ ಅನುದಾನ ಹಂಚಿಕೆಯಲ್ಲಿ ರಾಜಕೀಯ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಆಡಳಿತ- ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಜಟಾಪಟಿ ನಡೆದ ಘಟನೆ ವಿಧಾನಸಭೆಯಲ್ಲಿ ನಡೆಯಿತು.
ಪ್ರಶ್ನೋತ್ತರದ ವೇಳೆ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು, ಹೈದ್ರಾಬಾದ್- ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನದಡಿ ಪ್ರತ್ಯೇಕ ಅನುದಾನ ನೀಡಿದಂತೆ ಹೆಚ್ಚು ಮಳೆ ಸುರಿದು ರಸ್ತೆ ಹಾಳಾಗುವ ಕರಾವಳಿ ಭಾಗಕ್ಕೂ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಸುರೇಶ್‍ಗೌಡ, ಅನುದಾನವನ್ನು ಒಂದು ಪಕ್ಷದ ಶಾಸಕರಿಗೆ ಹೆಚ್ಚು ನೀಡಲಾಗುತ್ತಿದೆ. ಬಿಜೆಪಿ-ಜೆಡಿಎಸ್‍ನವರಿಗೆ ತಾರತಮ್ಯವಾಗುತ್ತಿದೆ. ಇದನ್ನು ಸರಿಪಡಿಸದೇ ಇದ್ದರೆ ನಾವು ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನು ಒಪ್ಪದ ಕಾಂಗ್ರೆಸ್ ಶಾಸಕರು ಬಿಜೆಪಿ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಿಗೆ ಕಡಿಮೆ ಅನುದಾನ ನೀಡಲಾಗುತ್ತಿತ್ತು ಎಂದು ತಿರುಗೇಟು ನೀಡಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಶಾಸಕರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು.
ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಮಾತನಾಡಿ, ರಸ್ತೆ ದುರಸ್ತಿಗೆ ಎನ್ಡಿಆರ್ಎಫ್ನಡಿ 30 ಸಾವಿರ, ಮನೆ ನಿರ್ಮಾಣಕ್ಕೆ 1.25 ಲಕ್ಷ ರೂ. ನೀಡಲಾಗುತ್ತಿದೆ. ಇದು ಯಾವುದಕ್ಕೂ ಸಾಲುವುದಿಲ್ಲ. ಮಳೆಗಾಲದಲ್ಲಿ ಹಾನಿಗೊಳಗಾದ ರಸ್ತೆ, ಮನೆಗಳಿಗೆ ವಿಶೇಷ ಪ್ಯಾಕೇಜ್ ನೀಡಿ ಎಂದು ಒತ್ತಾಯಿಸಿದರಲ್ಲದೆ ಹಿಂದೆ ಮಹದೇವಪ್ಪ ಲೋಕೋಪಯೋಗಿ ಸಚಿವರಾಗಿದ್ದಾಗ, ತಾರತಮ್ಯ ಮಾಡದೆ ಅನುದಾನ ಹಂಚಿದ್ದರು. ಈಗ ತಾರತಮ್ಯ ಹೆಚ್ಚಾಗಿದೆ ಎಂದರು.
ಪ್ರತಿಪಕ್ಷದ ನಾಯಕ ಆರ್. ಅಶೋಕ್, ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗದಂತೆ ಎಚ್ಚರಿಕೆ ವಹಿಸುವಂತೆ ತಾಕೀತು ಮಾಡಿದರು. ಉತ್ತರ ನೀಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಳೆಗಾಲದ ನಂತರ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು. ಸದ್ಯಕ್ಕೆ ತಾತ್ಕಾಲಿಕವಾಗಿ ಸಂಚಾರ ಸುಗಮಗೊಳ್ಳಲು ಅಗತ್ಯ ಕೆಲಸ ನಿರ್ವಹಿಸುವುದಾಗಿ ಹೇಳಿದರು.
ಅನುದಾನ ಹಂಚಿಕೆಯಲ್ಲಿ ನಮ್ಮ ಸರ್ಕಾರ ಯಾವುದೇ ತಾರತಮ್ಯ ಮಾಡಿಲ್ಲ. ಸಿಐಆರ್ಎಫ್ನ ಅನುದಾನವನ್ನು ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ :ಕರಾವಳಿ, ಮಲೆನಾಡಿನಲ್ಲಿ ಮುಂಗಾರು ತಗ್ಗುವ ಲಕ್ಷಣ: ಕೆಲ ಜಿಲ್ಲೆಗಳಿಗೆ ಮಾತ್ರ ಅಲರ್ಟ್ ಘೋಷಣೆ - Karnataka Weather Forecast