ಬೆಂಗಳೂರು: ವಿಮಾನದಲ್ಲಿ ನಗರಕ್ಕೆ ಬಂದು ಪಿಜಿಗಳಲ್ಲಿ ಲ್ಯಾಪ್ ಟಾಪ್ ಕಳ್ಳತನ ಮಾಡುತ್ತಿದ್ದ ಬಿ.ಟೆಕ್ ಪದವೀಧರೆಯನ್ನು ಹೆಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಮೂಲದ ಜಸು ಅಗರ್ವಾಲ್(29) ಬಂಧಿತೆ. ಈಕೆಯಿಂದ 10 ಲಕ್ಷ ರೂ. ಮೌಲ್ಯದ 24 ಲಾಪ್ ಟಾಪ್ಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಿ.ಟೆಕ್ ಪದವೀಧರೆಯಾಗಿರುವ ಅಗರ್ವಾಲ್, ಈ ಹಿಂದೆ ನೋಯ್ಡಾದ ಖಾಸಗಿ ಬ್ಯಾಂಕ್ವೊಂದರಲ್ಲಿಕೆಲಸ ಮಾಡುತ್ತಿದ್ದಳು. ಕಡಿಮೆ ಸಂಬಳ ಹಿನ್ನೆಲೆ ಕೆಲಸ ತೊರೆದಿದ್ದ ಆಕೆ ಬೆಂಗಳೂರಿಗೆ ಬಂದು ವಿವಿಧ ಕಂಪನಿಗಳಲ್ಲಿ ಸಂದರ್ಶನ ಎದುರಿಸಿದ್ದರೂ ಕೆಲಸ ಸಿಕ್ಕಿರಲಿಲ್ಲ.
ಸಾಫ್ಟ್ವೇರ್ ಕಂಪನಿಗಳಿರುವ ಸಮೀಪದ ಬೆಳ್ಳಂದೂರು, ಸಿಲ್ಕ್ ಬೋರ್ಡ್, ಹೆಬ್ಬಾಳ, ವೈಟ್ಫೀಲ್ಟ್ ಹಾಗೂ ಮಹದೇವಪುರ ಸುತ್ತಮುತ್ತಲಿನ ಪಿಜಿ ಹಾಗೂ ಹೊಟೇಲ್ಗಳಲ್ಲಿ ಜಸು ಅಗರ್ವಾಲ್ ವಾಸ್ತವ್ಯ ಹೂಡಿದ್ದಳು. ಇಲ್ಲಿನ ಪಿಜಿಗಳಲ್ಲಿ ಉಳಿದುಕೊಂಡವರ ಪೈಕಿ ಬಹುತೇಕರು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರಿಂದ ಲ್ಯಾಪ್ಟಾಪ್ ಬಳಸುತ್ತಿದ್ದರು. ಇದನ್ನ ಗಮನಿಸಿ ಲ್ಯಾಪ್ಟಾಪ್ ಕದಿಯಲು ನಿರ್ಧರಿಸಿದ್ದಳು. ಪಿಜಿಯಲ್ಲಿ ಊಟ ಮಾಡುವ ಸಮಯದಲ್ಲಿ ರೂಮ್ಗಳಿಗೆ ತೆರಳಿ ಲ್ಯಾಪ್ ಟಾಪ್ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದಳು. ವಿದ್ಯಾವಂತೆಯಾಗಿದ್ದರಿಂದ ಲ್ಯಾಪ್ಟಾಪ್ ನಲ್ಲಿ ಪಾಸ್ ವರ್ಡ್ ಗಳನ್ನ ಬದಲಾಯಿಸಿ ಮಾರತ್ತಹಳ್ಳಿ, ಯಲಹಂಕ ಹಾಗೂ ಆರ್.ಟಿ.ನಗರದಲ್ಲಿರುವ ಲ್ಯಾಪ್ ಟಾಪ್ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಳು. ಒಂದು ಲ್ಯಾಪ್ ಟಾಪ್ ಸುಮಾರು 10 ಸಾವಿರ ರೂಗೆ ಮಾರಾಟ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.