ಬಳ್ಳಾರಿ:ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟಗಳ ಬಲಾಬಲ ಪರೀಕ್ಷೆಗೆ ಸಾಕ್ಷೀಭೂತವಾಗಿ ನಡೆಯುತ್ತಿರುವ ಲೋಕಸಭೆ ಚುನಾವಣೆ ವಿವಿಧ ಕಾರಣಗಳಿಗೆ ಗಮನ ಸೆಳೆದಿದೆ. ಕರ್ನಾಟಕದಲ್ಲಿಯೂ ಚುನಾವಣಾ ಕಾವು ರಂಗೇರಿದೆ. ಈ ನಡುವೆ ಅಣ್ಣ ತಂಗಿ ಜೋಡಿ ಪ್ರಸಕ್ತ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವುದು ವಿಶೇಷ. ಅಣ್ಣ ಕರ್ನಾಟಕದಿಂದ ಸ್ಪರ್ಧಿಸುತ್ತಿದ್ದರೆ, ತಂಗಿ ಆಂಧ್ರದಿಂದ ಕಣಕ್ಕಿಳಿದಿದ್ದಾರೆ. ಇಬ್ಬರು ಭಿನ್ನಭಿನ್ನ ಪಕ್ಷಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಶ್ರೀರಾಮುಲು ಹಾಗೂ ಜೆ.ಶಾಂತಾ ಅವರೇ ಅದೃಷ್ಟ ಪರೀಕ್ಷೆಗಿಳಿದಿರುವ ಅಣ್ಣ ತಂಗಿ ಜೋಡಿ. ಬಿಜೆಪಿ ಅಭ್ಯರ್ಥಿಯಾಗಿ ಶ್ರೀ ರಾಮುಲು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ಜೆ. ಶಾಂತಾ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹಿಂದೂಪುರದಿಂದ ಕಣಕ್ಕಿಳಿದಿದ್ದಾರೆ.
2009ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆ. ಶಾಂತಾ, ಕಾಂಗ್ರೆಸ್‌ನ ಎನ್.ವೈ.ಹನುಮಂತಪ್ಪ ಅವರ ವಿರುದ್ದ 2243 ಮತಗಳ ಅಂತರದಿಂದ ವಿಜಯಿಯಾಗಿದ್ದರು. ಆ ವೇಳೆ ರಾಜಕೀಯಕ್ಕೆ ಹೊಸ ಮುಖವಾಗಿದ್ದರೂ ರೆಡ್ಡಿ ಸಹೋದರರೇ ವರ್ಚಸ್ಸಿನಿಂದ ಗೆಲುವು ತಮ್ಮದಾಗಿಸಿಕೊಂಡಿದ್ದರು. 2014 ರಲ್ಲಿ ತಮ್ಮ ಸೋದರ ಶ್ರೀರಾಮುಲು ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟರು.
2018ರಲ್ಲಿ ಶ್ರೀರಾಮುಲು ರಾಜ್ಯ ರಾಜಕಾರಣಕ್ಕೆ ಮರಳಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಜೆ. ಶಾಂತಾ ಅವರನ್ನು ಉಪ ಚುನಾವಣೆಯಲ್ಲಿ ಕಣಕ್ಕಿಳಿಸಲಾಯಿತು. ಆದರೆ, ಚುನಾವಣೆಯಲ್ಲಿ ಸೋಲುಂಡರು. ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಈ 2023ರ ಬಿಜೆಪಿ ಅಭ್ಯರ್ಥಿಯಾಗಲು ಪ್ರಯತ್ನಿಸಿದ್ದರು.