ಬೆಂಗಳೂರು:ಅಲ್ಪ ದೂರ ಕ್ರಮಿಸುವ ವಿದ್ಯುತ್ ಚಾಲಿತ ಪಾಡ್ ಸಾರಿಗೆ ಇನ್ವೆಸ್ಟ್ ಕರ್ನಾಟಕ ಪ್ರದರ್ಶನ ಮಳಿಗೆಯಲ್ಲಿ ಗಮನ ಸೆಳೆಯುತ್ತಿದೆ. ಏನಿದು 'ನ್ಯೋ ಪಾಡ್ ' (NWO POD) ಸಾರಿಗೆ ತಂತ್ರಜ್ಞಾನ ಎಂಬ ವರದಿ ಇಲ್ಲಿದೆ.
ಏರ್ ಟ್ಯಾಕ್ಸಿ ಬಳಿಕ ಹೂಡಿಕೆದಾರರ ಸಮಾವೇಶದ ಪ್ರದರ್ಶನ ಮಳಿಗೆಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು 'ನ್ಯೋ ಪಾಡ್'. ಈ ನ್ಯೋ ಪಾಡ್ ಸಾರಿಗೆ ತಂತ್ರಜ್ಞಾನ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ವಿದ್ಯುತ್ ಚಾಲಿತ ಪಾಡ್ ಸಾರಿಗೆ ಅಲ್ಪ ಅಂತರವನ್ನು ಕ್ರಮಿಸುವ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದೆ. ನಗರ ಪ್ರದೇಶಗಳಲ್ಲಿ 1-10 ಕಿ.ಮೀ. ದೂರವನ್ನು ಕ್ರಮಿಸಲು ಅನುಕೂಲಕರವಾಗುವ ಈ ಇವಿ ಪಾಡ್ ಸಾರಿಗೆಯನ್ನು ನ್ಯೋ ಕಮ್ಯುಟ್ ಸಂಸ್ಥೆ ಅಭಿವೃದ್ಧಿ ಪಡಿಸಿದೆ.
ಪಾಡ್ ಆಧಾರಿತ ಸ್ವಾಯತ್ತ ಸಾರಿಗೆ ವ್ಯವಸ್ಥೆ ಮೂಲಕ ಸಾರ್ವಜನಿಕ ಸಾರಿಗೆ ಕೇಂದ್ರ ಹಾಗೂ ಗಮ್ಯ ಸ್ಥಾನದ ಮಧ್ಯದ ಅಂತರಕ್ಕೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಬೆಂಗಳೂರಿನ ರೈಲ್ವೇ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ, ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣದ ವರೆಗೆ, ದೊಡ್ಡ ಕ್ಯಾಂಪಸ್ ನೊಳಗಿನ ಸಂಪರ್ಕ ಅಗತ್ಯತೆ ಪೂರೈಸಲು ಪಾಡ್ ಸಾರಿಗೆ ಅನುಕೂಲವಾಗಲಿದೆ. ಬೆಂಗಳೂರಲ್ಲಿ ಜನನಿಬಿಡ ನಿಲ್ದಾಣಗಳಲ್ಲಿ ಅಲ್ಪ ಅಂತರದ ದೂರವನ್ನು ಕ್ರಮಿಸಲು ಇದು ಸಹಕಾರಿಯಾಗಲಿದೆ.
ಏನಿದು ಇವಿ POD ಸಾರಿಗೆ?:ಕಡಿಮೆ ದೂರದಸಂಚಾರಕ್ಕಾಗಿ ಪ್ರತ್ಯೇಕ ಪಾತ್ ವೇ ಮೇಲೆ ಓಡಾಡುವ ವಿದ್ಯುತ್ ಚಾಲಿತ ಪಾಡ್ ಸಾರಿಗೆ ವ್ಯವಸ್ಥೆ ಇದಾಗಿದೆ. ಒಂದು ಪಾಡ್ ಸುಮಾರು 8 ಪ್ರಯಾಣಿಕರನ್ನು ಕೊಂಡೊಯ್ಯಬಹುದಾಗಿದೆ. ಈ ಇವಿ ಪಾಡ್ ವ್ಯವಸ್ಥೆ ಪಾಯಿಂಟ್ ಟು ಪಾಯಿಂಟ್ ಸಂಚಾರಕ್ಕೆ ಅನುಕೂಲಕರ ಸಾರಿಗೆ ಮಾದರಿಯಾಗಿದೆ. ಪ್ರಯಾಣಿಕರು ಪಾಡ್ ಒಳಗೆ ಬಂದು, ಹೋಗಬೇಕಾದ ಸ್ಥಳವನ್ನು ಆಯ್ಕೆ ಮಾಡಿದರೆ ಸಾಕು. ಸ್ವಯಂ ಚಾಲಿತವಾಗಿ ಪಾಡ್ ಕಾರ್ಯನಿರ್ವಹಿಸುತ್ತದೆ.
ಈ ಪಾಡ್ ಸಾರಿಗೆ ಸಂಪೂರ್ಣ ವಿದ್ಯುತ್ ಚಾಲಿತ ವ್ಯವಸ್ಥೆಯಾಗಿದೆ. ಇದರ ಕಾರ್ಯಾಚರಣೆ ವೆಚ್ಚ ಕಿ.ಮೀ.ಗೆ 1₹ ಗಿಂತ ಕಡಿಮೆ ಇದೆ. ಮೂರು ಕಂಬಿಗಳ ಟ್ರಾಕ್ ಮೇಲೆ ಈ ಪಾಡ್ ಸಂಚರಿಸುತ್ತದೆ. ಸ್ವಯಂ ಚಾಲಿತ ವ್ಯವಸ್ಥೆ ಇದಾಗಿದೆ. ಟ್ರಾಕ್ ಅಳವಡಿಸಲು ಸುಮಾರು 1.5 ಮೀಟರ್ ಸ್ಥಳಾವಕಾಶ ಬೇಕು. 1.5 ಕಿ.ಮೀ ದೂರ, 3 PODಗಳಿಗೆ ಅಂದಾಜು ಸುಮಾರು 3-5 ಕೋಟಿ ರೂ. ವೆಚ್ಚವಾಗುತ್ತದೆ. ಇದು ಲಿಫ್ಟ್ ಮಾದರಿ ಕಾರ್ಯನಿರ್ವಹಿಸುತ್ತದೆ. ಆದರೆ ಇದು ಸಮತಲ ಎಲಿವೇಟರ್ ಆಗಿ ಕಾರ್ಯಾಚರಿಸುತ್ತದೆ.
POD ಸಾರಿಗೆ ವಿಶೇಷತೆ ಏನು?:ಇದು ಶೇ.100ರಷ್ಟು ಸ್ವಯಂ ಚಾಲಿತ ಸಾರಿಗೆ ವ್ಯವಸ್ಥೆಯಾಗಿದೆ. ಅತಿ ವೇಗದಲ್ಲಿ ಸಂಚರಿಸಬಹುದಾದ ಈ POD ಸಾರಿಗೆ ಎಲ್ಲಾ ವಾತಾವರಣ ಹಾಗೂ ಭೂ ಪ್ರದೇಶದ ಸ್ಥಿತಿಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. PODಯನ್ನು ಕನಿಷ್ಠ ಕಾರ್ಯಾಚರಣೆ ವೆಚ್ಚಕ್ಕಾಗಿ ವಿನ್ಯಾಸಗೊಳಿಸಲಾಗಿದೆ.