ಬೆಂಗಳೂರು:ನಗರದ ಚಾಮರಾಜಪೇಟೆಯಲ್ಲಿ ಕಿಡಿಗೇಡಿಗಳು ಹಸುಗಳ ಕೆಚ್ಚಲು ಕೊಯ್ದಿರುವ ಅಮಾನವೀಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಇದು ಅತ್ಯಂತ ಹೇಯ ವಿಕೃತಿ ಎಂದು ಜರಿದಿದ್ದಾರೆ.
ಪಕ್ಷದ ರಾಜ್ಯದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕೂಡಲೇ ಆ ದುಷ್ಟರನ್ನು ಪತ್ತೆ ಹಚ್ಚಿ ಕಠಿಣವಾಗಿ ಶಿಕ್ಷಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಹಸುಗಳ ಕೆಚ್ಚಲು ಕೊಯ್ದ ಘಟನೆ ಬಗ್ಗೆ ಬೆಳಗ್ಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ದೃಶ್ಯ ಸಮೇತ ವರದಿಗಳು ಬಂದಾಗ ನನಗೆ ತೀವ್ರ ಆಘಾತ ಉಂಟಾಯಿತು. ಇದು ರಾಕ್ಷಸಿ ಕೃತ್ಯ. ಕಾಂಗ್ರೆಸ್ ಆಡಳಿತ ಇವತ್ತು ಎಲ್ಲಿಗೆ ಬಂದಿದೆ? ಎಂಬುದಕ್ಕೆ ಇದೇ ಸಾಕ್ಷಿ. ಇಲ್ಲಿಯವರೆಗೆ ಮನುಷ್ಯರನ್ನು ಕೊಲ್ಲುವುದನ್ನು ನೋಡಿದ್ದೇವೆ. ಹಸುವನ್ನು ನಾವು ಕಾಮಧೇನು, ಮಹಾಲಕ್ಷ್ಮೀ ಎಂದು ಪೂಜಿಸುತ್ತಿದ್ದೇವೆ. ಅಂಥ ಕಾಮಧೇನುವಿನ ಕೆಚ್ಚಲು ಕೊಯ್ಯುವ ಹೇಯ ಕೃತ್ಯ ಮಾಡಿರುವ ಕೆಟ್ಟ ಮನಸ್ಥಿತಿಗೆ ಏನನ್ನಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವ ಪರಮೇಶ್ವರ್ ಅವರು ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಬೆಣ್ಣೆ ಮಾತು ಇಲ್ಲಿ ನಡೆಯಲ್ಲ. ನಿಮ್ಮ ಡಿನ್ನರ್ ಮೀಟಿಂಗ್ ನಿಲ್ಸಿ, ಆಡಳಿತ ಸರಿ ಮಾಡೋದನ್ನು ನೋಡಿ. ಈ ಪ್ರಕರಣದ ಬಗ್ಗೆ ಮುಲಾಜಿಲ್ಲದೆ ಕ್ರಮ ಜರುಗಿಸಿ. ಇವರ ಸರ್ಕಾರದ ಅವಧಿಯಲ್ಲಿ ರಾಕ್ಷಸಿ ಕೃತ್ಯ ಮೆರೆಯುವ ಇಂಥ ಜನ ಹೆಚ್ಚಾಗುತ್ತಿದ್ದಾರೆ ಎಂದರು.