ಬೆಂಗಳೂರು:ನಗರದಲ್ಲಿರ‍್ಯಾಪಿಡೋ ಕ್ಯಾಪ್ಟನ್‌ಗೆ ಬೆದರಿಸಿ ಹಣ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಭಾತ್ ಮತ್ತು ಪುನೀತ್ ಕುಮಾರ್ ಬಂಧಿತ ಆರೋಪಿಗಳು. ಮಾರ್ಚ್ 19ರಂದು ರೈಡ್ ನೆಪದಲ್ಲಿ ದೀನಬಂಧು ನಾಯಕ್ ಎಂಬ ಉತ್ತರ ಭಾರತ ಮೂಲದ ರ‍್ಯಾಪಿಡೋ ಕ್ಯಾಪ್ಟನ್‌ನ್ನ ಬೆದರಿಸಿದ್ದ ಆರೋಪಿಗಳು ಹಣ ಹಾಗೂ ಆತನ ದ್ವಿಚಕ್ರ ವಾಹನ ಕಿತ್ತುಕೊಂಡು ನೆಲಮಂಗಲ ಸಮೀಪದ ಸೊಂಡೆಕೊಪ್ಪ ರಸ್ತೆಯಲ್ಲಿ ಬಿಟ್ಟು ಹೋಗಿದ್ದರು.
ನಗರದಲ್ಲಿ ಆರು ತಿಂಗಳಿನಿಂದ ವಾಸವಿದ್ದ ದೀನಬಂಧು ನಾಯಕ್ ರ‍್ಯಾಪಿಡೋ ಕ್ಯಾಪ್ಟನ್, ಫುಡ್ ಡಿಲೆವರಿ ಬಾಯ್ ಕೆಲಸ ಮಾಡಿಕೊಂಡಿದ್ದ. ಮಾರ್ಚ್ 18ರಂದು ಕೊಟ್ಟಿಗೆಪಾಳ್ಯದಿಂದ ಜೀವನ್ ಭೀಮಾನಗರಕ್ಕೆ ಆರೋಪಿ ಪ್ರಭಾತ್ನನ್ನ ಡ್ರಾಪ್ ಮಾಡಿದ್ದ. ಮರುದಿನ ನೇರವಾಗಿ ದೀನಬಂಧು ನಾಯಕ್ ನಂಬರ್ಗೆ ಕರೆ ಮಾಡಿದ್ದ ಪ್ರಭಾತ್, ಈಸ್ಟ್ ವೆಸ್ಟ್ ಕಾಲೇಜು ಸಮೀಪದಿಂದ ನೆಲಮಂಗಲಕ್ಕೆ ಡ್ರಾಪ್ ಕೊಡುವಂತೆ ಕೇಳಿದ್ದ. ರ‍್ಯಾಪಿಡೋಗೆ ಕೊಡಬೇಕಾದ ಕಮಿಷನ್ ಉಳಿಯುತ್ತದೆ ಎಂಬ ಆಸೆಯಿಂದ ದೀನಬಂಧು ಆಫ್‌ಲೈನ್ ರೈಡ್ಗೆ ಒಪ್ಪಿಕೊಂಡು, ಅದರಂತೆ ರಾತ್ರಿ 11ಗಂಟೆ ಸುಮಾರಿಗೆ ನೆಲಮಂಗಲ ಬಳಿ ಆರೋಪಿಯನ್ನ ಡ್ರಾಪ್ ಮಾಡಿದ್ದ.