ಕರ್ನಾಟಕ

karnataka

ETV Bharat / state

ಆರೋಗ್ಯ ಇಲಾಖೆಯ ಆಶಾಕಿರಣ ಯೋಜನೆಗೆ ಹಾವೇರಿಯಲ್ಲಿ ಸಿಎಂ ಚಾಲನೆ: ಸಚಿವ ದಿನೇಶ್ ಗುಂಡೂರಾವ್ - ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ

ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ, ಚಾಮರಾಜನಗರದಲ್ಲಿ ಆಶಾಕಿರಣ ಯೋಜನೆ ಜಾರಿ. ಆಶಾಕಿರಣ ಯೋಜನೆಯಡಿ ಎಲ್ಲ ವಯಸ್ಸಿನವರಿಗೆ ಕಣ್ಣಿನ ತಪಾಸಣೆ ಮಾಡಿ ದೃಷ್ಟಿ ದೋಷಯುಳ್ಳವರಿಗೆ ಉಚಿತ ಕನ್ನಡಕ ವಿತರಣೆ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Health Minister Dinesh Gundu Rao spoke at a press conference.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮದವರ ಜೊತೆಗೆ ಮಾತನಾಡಿದರು.

By ETV Bharat Karnataka Team

Published : Feb 17, 2024, 3:53 PM IST

Updated : Feb 18, 2024, 8:26 AM IST

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮಂಗಳೂರು:ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಆಶಾಕಿರಣ ಯೋಜನೆಯ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯನವರು ಫೆ.18ರಂದು ಹಾವೇರಿಯಲ್ಲಿ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು 'ಆಶಾಕಿರಣ - ನಿಮ್ಮ ಮನೆ ಬಾಗಿಲಿಗೆ ಕಣ್ಣಿನ ಆರೈಕೆ' ಎಂಬ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ಆಶಾಕಿರಣ ಆಂದೋಲನ ಕಾರ್ಯಕ್ರಮದಡಿ ಆಯೋಜಿಸಲಾಗಿದೆ. ಎಲ್ಲ ವಯಸ್ಸಿನವರಿಗೂ ಕಣ್ಣಿನ ತಪಾಸಣೆ ಮಾಡಿ ದೃಷ್ಟಿ ದೋಷ ಇರುವವರಿಗೆ ಉಚಿತ ಕನ್ನಡಕ ವಿತರಣೆ ಹಾಗೂ ಆವಶ್ಯಕತೆಯಿರುವವರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

8 ಜಿಲ್ಲೆಗಳಲ್ಲಿ ಆಶಾಕಿರಣ ಜಾರಿ: ಅಂಧತ್ವ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ 'ಆಶಾಕಿರಣ' ಕಾರ್ಯಕ್ರಮ ಆರಂಭದಲ್ಲಿ 8 ಜಿಲ್ಲೆಗಳಲ್ಲಿ ಜಾರಿಯಾಗುತ್ತಿದ್ದು, ಹಂತ ಹಂತವಾಗಿ ರಾಜ್ಯದ ಉಳಿದ ಜಿಲ್ಲೆಗಳಿಗೂ ಇದನ್ನು ವಿಸ್ತರಿಸಲಾಗುವುದು. ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ, ಚಾಮರಾಜನಗರ ಹಾಗೂ ಎರಡನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು ಉತ್ತರ ಕನ್ನಡ ಜಿಲ್ಲೆಯಲ್ಲಿ ಆಶಾಕಿರಣ ಅಭಿಯಾನ ಜಾರಿಯಾಗಲಿದೆ ಎಂದು ತಿಳಿಸಿದರು.

ಕಣ್ಣು ತಪಾಸಣೆ:"ಆಶಾಕಿರಣ" ಅಭಿಯಾನವು ಕಣ್ಣಿನ ಆರೋಗ್ಯ ಸೇವೆಗಳ ಲಭ್ಯತೆ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಆರೋಗ್ಯ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ-ಮನೆಗಳಿಗೆ ಭೇಟಿ ನೀಡಿ ಎಲ್ಲ ವಯೋಮಾನದವರಿಗೆ ಪ್ರಾಥಮಿಕ ಹಂತದ ಕಣ್ಣಿನ ತಪಾಸಣೆ ನಡೆಸುವರು.

ತಪಾಸಣೆ ವೇಳೆ ಕಣ್ಣಿನ ತೊಂದರೆ ಇದ್ದವರನ್ನು ದ್ವಿತೀಯ ಹಂತದ ತಪಾಸಣೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೇತ್ರಾಧಿಕಾರಿಗಳು ಪರೀಕ್ಷಿಸಿ ಕನ್ನಡಕಗಳ ಆವಶ್ಯಕತೆ ಇರುವವರಿಗೆ ಅವರ ದೃಷ್ಟಿ ದೋಷದ ಪ್ರಕಾರ ಕನ್ನಡಕಗಳನ್ನು ಕಾರ್ಯಕ್ರಮದ ವತಿಯಿಂದ ತರಿಸಿ ಉಚಿತವಾಗಿ ನೀಡಲಾಗುತ್ತದೆ ಎಂದು ವಿವರಿಸಿದರು.

ದೃಷ್ಟಿದೋಷ ಇರುವವರಿಗೆ ಉಚಿತ ಶಸ್ತ್ರ ಚಿಕಿತ್ಸೆ:ಕಣ್ಣಿನ ಪೊರೆ ಇರುವವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ನೋಂದಾಯಿತ ಸ್ವಯಂಸೇವಾ ಸಂಸ್ಥೆಗಳ ಆಸ್ಪತ್ರೆಗಳಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಮೊದಲ ಹಂತದ 4 ಜಿಲ್ಲೆಗಳಲ್ಲಿ ಒಟ್ಟು 56,59,036 ಜನರನ್ನು ಆಶಾ ಕಾರ್ಯಕರ್ತೆಯರ ಮೂಲಕ ಪ್ರಾಥಮಿಕ ತಪಾಸಣೆಗೆ ಒಳಪಡಿಸಲಾಗಿದೆ.

ಅವರಲ್ಲಿ 8,28, 884 ಜನರಿಗೆ ನೇತ್ರ ಸಂಬಂಧಿ ತೊಂದರೆಗಳು ಇರುವುದಾಗಿ ಆಶಾ ಕಾರ್ಯಕರ್ತೆಯರು ಮಾಹಿತಿ ಒದಗಿಸಿದ್ದಾರೆ. ಅವರನ್ನು ದ್ವಿತೀಯ ಹಂತದ ಚಿಕಿತ್ಸೆಗೆ ಒಳಪಡಿಸಿದಾಗ 2,45,588 ಮಂದಿಗೆ ದೃಷ್ಟಿ ದೋಷ ಕಂಡು ಬಂದಿದೆ. ಅವರಿಗೆ ಉಚಿತ ಕನ್ನಡಕಗಳನ್ನು ಒದಗಿಸಲಾಗುತ್ತದೆ. 39,336 ಜನರಿಗೆ ಕಣ್ಣಿನ ಪೊರೆ ತೊಂದರೆ ಇದ್ದು, ಅವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಒದಗಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಎರಡನೇ ಹಂತದ ಜಿಲ್ಲೆಗಳು: ಎರಡನೇ ಹಂತದ 4 ಜಿಲ್ಲೆಗಳಲ್ಲಿ ಒಟ್ಟು 5,277,235 ಜನರನ್ನು ಪ್ರಾಥಮಿಕ ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ 943,398 ಜನರಲ್ಲಿ ನೇತ್ರ ಸಂಬಂಧಿ ತೊಂದರೆಗಳಿರುವುದು ಪತ್ತೆಯಾಗಿದೆ. ಕನ್ನಡಕ ವಿತರಣೆ, ಶಸ್ತ್ರ ಚಿಕಿತ್ಸೆ ಸೇರಿದಂತೆ ಹೆಚ್ಚಿನ ಚಿಕಿತ್ಸೆಗೆ ಕ್ರಮ ವಹಿಸಲಾಗುವುದು. ಮುಂದಿನ ಹಂತಗಳಲ್ಲಿ (2024-25) ರಾಮನಗರ, ಯಾದಗಿರಿ, ಕೊಡಗು, ಗದಗ ಹಾಗೂ 2025-26ರ ಸಾಲಿನಲ್ಲಿ ಚಿಕ್ಕಮಗಳೂರು, ಬೀದರ್, ಕೋಲಾರ, ಬಾಗಲಕೋಟೆ ಜಿಲ್ಲೆಗಳನ್ನು ಆಶಾಕಿರಣ ಯೋಜನೆಗಾಗಿ ಆಯ್ಕೆ ಮಾಡಲಾಗಿದೆ. ಹಂತ, ಹಂತವಾಗಿ ರಾಜ್ಯದ ಉಳಿದ ಜಿಲ್ಲೆಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದರು.

ಉಚಿತ ನೇತ್ರ ಚಿಕಿತ್ಸಾ ಶಿಬಿರ: 6.5 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕವು, ಕಣ್ಣಿನ ಆರೈಕೆಗೆ ಸಂಬಂಧಿಸಿದಂತೆ ಅತ್ಯುತ್ತಮ ಚಿಕಿತ್ಸಾ ವ್ಯವಸ್ಥೆಯನ್ನು ಹೊಂದಿದೆ. ಆಶಾಕಿರಣ ಯೋಜನಾ ಕಾರ್ಯಕ್ರಮದಡಿ ಆಯೋಜಿಸಲಾಗುವ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳು ಜನಸಾಮಾನ್ಯರಿಗೆ ವರದಾನವಾಗಲಿವೆ. ಕಣ್ಣಿನ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ನೆಮ್ಮದಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ವಿವರಿಸಿದರು.

ಇದನ್ನೂಓದಿ:ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ: ಬೆಳಗಾವಿಯಲ್ಲಿ 1 ಕ್ವಿಂಟಾಲ್ ಜಿಲೇಬಿ ಹಂಚಿ ಸಂಭ್ರಮಾಚರಣೆ

Last Updated : Feb 18, 2024, 8:26 AM IST

ABOUT THE AUTHOR

...view details