ಪ್ರತಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಹೇಳಿಕೆ (ETV Bharat) ಧಾರವಾಡ: ಮುಡಾ ಹಗರಣದ ದಾಖಲೆಗಳಿಗೆ ವೈಟ್ನರ್ ಹಚ್ಚಿದ ಪ್ರಕರಣ ಬೆಳಕಿಗೆ ಬಂದ ಮೇಲೆ ಅದರ ಮಾರನೇ ದಿನವೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ಹೋಗಿ, ಅಲ್ಲಿದ್ದ ದಾಖಲೆಗಳನ್ನು ಪಡೆದುಕೊಂಡು ಮುಚ್ಚಿಟ್ಟಿದ್ದಾರೆ. ಈ ಕುರಿತು ತನಿಖೆಯಾಗಬೇಕು ಎಂದು ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಒತ್ತಾಯಿಸಿದ್ದಾರೆ.
ಅದರಲ್ಲಿ ಎರಡು ದಾಖಲೆಗಳು ಮೈಸೂರಿನಲ್ಲಿ ಉಳಿದಿದ್ದವು. ಅವು ಜನರು ಹಾಗೂ ಮಾಧ್ಯಮಕ್ಕೆ ಸಿಕ್ಕಿದೆ. ಆ ದಾಖಲೆಗೆ ವೈಟ್ನರ್ ಹಚ್ಚಿ ಗದ್ದಲ ಮಾಡುವ ಕೆಲಸವಾಗಿದೆ. ನನಗೆ ನ್ಯಾಯಾಲಯದ ಮೇಲೆ ಸಂಪೂರ್ಣ ಭರವಸೆ ಇದೆ. ರಾಜ್ಯಪಾಲರ ನಿಲುವನ್ನು ಆ.29ರಂದು ನ್ಯಾಯಾಲಯ ಎತ್ತಿ ಹಿಡಿಯಲಿದೆ. ರಾಜ್ಯಪಾಲರು ತಮ್ಮ ಬಳಿ ಬಂದ ದೂರಿನ ಮೇಲೆ ತನಿಖೆಗೆ ಆದೇಶಿಸಿದ್ದಾರೆ ಎಂದರು.
ತಮ್ಮ ಮೇಲೆ ತನಿಖೆ ಬೇಡ ಎಂದು ಹೇಳಲು ಸಿಎಂಗೆ ಹಕ್ಕಿಲ್ಲ. ಸಿಎಂ ತಪ್ಪು ಮಾಡಿದಾಗ ಅವರ ಮೇಲೆ ತನಿಖೆ ಆಗಬಾರದು ಎಂದು ಹೇಳಲು ಕ್ಯಾಬಿನೆಟ್ಗೆ ಹಕ್ಕಿಲ್ಲ. ಸಾಂವಿಧಾನಿಕ ಪ್ರಮುಖರಾದ ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದಾರೆ. ಆ ಆದೇಶವನ್ನು ಕೋರ್ಟ್ ಎತ್ತಿ ಹಿಡಿಯಲಿದೆ. ಸಿಎಂಗೆ ರಾಜೀನಾಮೆ ಕೊಡೋದು ಬಿಟ್ಟು ಬೇರೆ ದಾರಿ ಹಾಗೂ ಉಪಾಯವಿಲ್ಲ ಎಂದು ಹೇಳಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮೇಲೆ ಪ್ರಾಸಿಕ್ಯೂಷನ್ ನಡೆಸಲು ಮನವಿ ಕುರಿತು ಮಾತನಾಡಿ, ಯಾವುದೇ ಹಗರಣ ಇದ್ದರೂ ತನಿಖೆ ಮಾಡಲಿ. ತನ್ನ ಮೈಮೇಲೆ ಹಗರಣ ಬಂದ ಮೇಲೆ ಬೇರೆ ಹಗರಣದ ಬಗ್ಗೆ ಮಾತಾಡೋದಲ್ಲ. 2013ರಿಂದ 18ರವರೆಗೆ ಇವರೇ ಸಿಎಂ ಇದ್ದರು. ಈಗಲೂ ಇವರೇ ಇದ್ದಾರೆ. ಇಷ್ಟು ದಿನ ಮಲಗಿದ್ರಾ? ನಾವು ತನಿಖೆ ಮಾಡಲು ಹೇಳುತ್ತೇವೆ. ಯಾರು ಬೇಡ ಎಂದು ಹರಿಹಾಯ್ದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಓಲೈಸುತ್ತಿದೆ. ಇದೀಗ ಹಿಂದೂಗಳಿಗೆ ಘಾಸಿಯಾಗುವಂತಹ ನಿರ್ಧಾರ ತೆಗೆದುಕೊಂಡಿದೆ. ನಮ್ಮ ದೇಶದಲ್ಲಿ ಯಾತ್ರೆಗೆ ವಿಶೇಷ ಮಹತ್ವವಿದೆ. ನಮ್ಮಲ್ಲಿ ಪ್ರವಾಸವೆಂದರೆ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವುದು. ಶೇ 95ರಷ್ಟು ಜನರು ಧಾರ್ಮಿಕ ಪ್ರವಾಸಕ್ಕೆ ಹೋಗುತ್ತಾರೆ. ಧಾರ್ಮಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕು. ಇದು ಬ್ರಿಟಿಷರ ಕಾಲದಿಂದಲೂ ಇದೆ.
ಆದರೆ ಇದೀಗ ಸರ್ಕಾರ ಹೊಸ ಆದೇಶ ಮಾಡಿದೆ ಎಂದರು.
ಪ್ರವಾಸಿ ತಾಣಗಳಾಗಿರುವ ಹಿಂದೂ ದೇವಾಲಯಗಳನ್ನು ಅಭಿವೃದ್ಧಿ ಮಾಡದಂತೆ ಸರ್ಕಾರ ಆದೇಶಿಸಿದೆ. ಸುತ್ತೋಲೆ ಮೂಲಕ ಪ್ರವಾಸೋದ್ಯಮ ಇಲಾಖೆಗೆ ಆದೇಶಿಸಿದೆ. ಆ ಮೂಲಕ ಹಿಂದೂಗಳಿಗೆ ಮರ್ಮಾಘಾತ ಎಸಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಸೇರಿ ಈ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಹಿಂದೂಗಳೆಲ್ಲ ರಸ್ತೆಗಿಳಿಯಬೇಕಾಗುತ್ತದೆ. ಮುಸ್ಲಿಮರ ಓಲೈಕೆ ಮಾಡಿ, ಸಾವಿರಾರು ಕೋಟಿ ಕೊಡಿ. ಆದರೆ ಹಿಂದೂಗಳಿಗೆ ಕೊಡೋ ದುಡ್ಡಿಗೇಕೆ ಕತ್ತರಿ ಹಾಕಿದ್ದೀರಿ?. ಪ್ರವಾಸೋದ್ಯಮ ಇಲಾಖೆಯಿಂದ ನಡೆಯುತ್ತಿದ್ದ ಅಭಿವೃದ್ಧಿಯನ್ನೇಕೆ ನಿಲ್ಲಿಸುತ್ತೀರಿ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬೆಲ್ಲದ್ ಗರಂ ಆದರು.
ಬೆಂಗಳೂರಿನಲ್ಲಿ ನೀರಿದ ದರ ಹೆಚ್ಚಳ ವಿಚಾರಕ್ಕೆ ಮಾತನಾಡಿದ ಅವರು, ಈ ಸರ್ಕಾರ ಬಂದ ಬಳಿಕ ಎಲ್ಲ ದರ ಏರಿಕೆಯಾಗಿದೆ. ವಿದ್ಯುತ್, ಬಸ್, ಸ್ಟ್ಯಾಂಪ್ ಡ್ಯೂಟಿ ದರ ಹೆಚ್ಚಳವಾಗಿದೆ ಎಂದು ಇದೇ ವೇಳೆ ದೂರಿದರು.
ಇದನ್ನೂ ಓದಿ:ಧಮ್ ಇದ್ದರೆ ಹಗರಣಗಳನ್ನು ಸಿಬಿಐಗೆ ವಹಿಸಿ: ಸಿದ್ದರಾಮಯ್ಯಗೆ ಬಿಜೆಪಿ ಚಾಲೆಂಜ್ - BJP Protest