ಬೆಂಗಳೂರು :ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಅಧಿಕಾರಿಗಳ ಸೋಗಿನಲ್ಲಿ ಜ್ಯುವೆಲ್ಲರ್ಸ್ ಶಾಪ್ ದೋಚಿ ಪರಾರಿಯಾಗಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಕೆ.ಆರ್.ಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಂಪತ್ ಕುಮಾರ್, ಜೊಶಿ ಥಾಮಸ್, ಅವಿನಾಶ್ ಹಾಗೂ ಸಂದೀಪ್ ಬಂಧಿತ ಆರೋಪಿಗಳು.
ಜನವರಿ 27ರಂದು ಕಾರಿನಲ್ಲಿ ಕೆ.ಆರ್.ಪುರಂನ ಮಹಾಲಕ್ಷ್ಮಿ ಜ್ಯುವೆಲರ್ಸ್ ಶಾಪ್ಗೆ ಬಂದಿದ್ದ ಆರೋಪಿಗಳು, ತಾವು 'ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಧಿಕಾರಿಗಳು, ಬೆಂಗಳೂರಿನ ಹಲವು ಚಿನ್ನದಂಗಡಿಗಳ ಮೇಲೆ ದಾಳಿ ಮಾಡಲಾಗಿದೆ ಅದರಲ್ಲಿ ನಿಮ್ಮದೂ ಒಂದು. ಹಾಲ್ ಮಾರ್ಕ್ ಇಲ್ಲದೆ ಅಕ್ರಮವಾಗಿ ನೀವು ಚಿನ್ನ ಮಾರಾಟ ಮಾಡುತ್ತಿದ್ದೀರಿ ಎಂಬ ಮಾಹಿತಿ ನಮಗೆ ದೊರೆತಿದೆ. ಹೀಗಾಗಿ ದಾಳಿ ಮಾಡಿದ್ದೇವೆ' ಎಂದಿದ್ದರು.
ಸುಮಾರು 40 ನಿಮಿಷ ಅಂಗಡಿಯಲ್ಲಿ ಶೋಧ ನಡೆಸಿದಂತೆ ಮಾಡಿ ಬಳಿಕ 80 ಲಕ್ಷ ರೂ. ಮೌಲ್ಯದ 1 ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡು, ಬಳಿಕ ಅಂಗಡಿ ಮಾಲೀಕನ ಕೈಗೆ ನಕಲಿ ನೋಟಿಸ್ ನೀಡಿ, ಮುಂದಿನ ವಾರ ತಮಿಳುನಾಡಿನ ಬಿಐಎಸ್ ಕಚೇರಿಗೆ ಬರುವಂತೆ ಹೇಳಿ ತೆರಳಿದ್ದರು. ಆದರೆ ಹೊರಡುವ ಮುನ್ನ ಚಿನ್ನದ ಅಂಗಡಿಯ ಸಿಸಿಟಿವಿ ಡಿವಿಆರ್ನ್ನು ಆರೋಪಿಗಳು ಪಡೆದುಕೊಂಡಿದ್ದರು.