ಬೆಂಗಳೂರು:ವ್ಯಕ್ತಿಯೊಬ್ಬನನ್ನ ಬರ್ಬರವಾಗಿ ಹತ್ಯೆ ಮಾಡಿ ಮೃತದೇಹವನ್ನು ಕತ್ತರಿಸಿ ಮೋರಿಗೆ ಎಸೆದಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ವಿ ಶ್ರೀನಾಥ್ (34) ಕೊಲೆಯಾದ ದುರ್ದೈವಿ. ಆರೋಪಿ ಮಾಧವ ರಾವ್ ಎಂಬಾತನನ್ನು ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:ಹಣಕಾಸು ಕಂಪನಿಯೊಂದರಬಸವೇಶ್ವರ ನಗರದ ಶಾಖೆಯಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದ ಶ್ರೀನಾಥ್, ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಥಣಿಸಂದ್ರದ ಅಂಜನಾದ್ರಿ ಲೇಔಟ್ನಲ್ಲಿ ವಾಸವಿದ್ದರು. ಮೇ 28ರಂದು ಬೆಳಗ್ಗೆ ಮನೆಯಿಂದ ಹೋಗಿದ್ದ ಶ್ರೀನಾಥ್ ಮನೆಗೆ ಮರಳಿರಲಿಲ್ಲ. ಪತಿ ನಾಪತ್ತೆಯಾಗಿದ್ದಾರೆ ಎಂದು ಮೇ 29 ರಂದು ಅವರ ಪತ್ನಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತನಿಖೆ ಕೈಗೊಂಡಾಗ ಶ್ರೀನಾಥ್ ಮೇ 28ರಂದು ಕೆ.ಆರ್. ಪುರಂನ ವಿಜಿನಾಪುರದಲ್ಲಿರುವ ಮಾಧವರಾವ್ ಎಂಬಾತನ ಮನೆಗೆ ಹೋಗಿರುವುದು ಪತ್ತೆಯಾಗಿತ್ತು. ಆದರೆ, ವಾಪಸಾಗಿರುವುದರ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಮತ್ತೊಂದೆಡೆ ಮಾಧವ್ ರಾವ್ ಸಹ ನಾಪತ್ತೆಯಾಗಿದ್ದ. ಇತ್ತ ಮಾಧವ್ ರಾವ್ ಮನೆಯ ಒಳಗಡೆ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ದವು. ತನಿಖೆ ಚುರುಕುಗೊಳಿಸಿದ ಪೊಲೀಸರು ಆಂಧ್ರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಮಾಧವ ರಾವ್ ನನ್ನ ವಶಕ್ಕೆ ಪಡೆದು ಕರೆತಂದು ವಿಚಾರಿಸಿದಾಗ ಆತ ಭೀಕರ ಕೊಲೆಯ ವಿಚಾರವನ್ನು ಬಾಯ್ಬಿಟ್ಟಿದ್ದಾನೆ.
ಹತ್ಯೆಯಾದ ಶ್ರೀನಾಥ್ ಹಾಗೂ ಮಾಧವ್ ರಾವ್ಗೆ ಎರಡು ವರ್ಷಗಳಿಂದ ಪರಿಚಯವಿತ್ತು. ಶ್ರೀನಾಥ್ ಬಳಿ ಮಾಧವ ರಾವ್ 5 ಲಕ್ಷ ರೂಪಾಯಿ ಚೀಟಿ ಹಾಕಿದ್ದ. ಆದರೆ, ಇತ್ತೀಚಿಗೆ ಚೀಟಿ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಚೀಟಿ ಹಣ ವಾಪಸ್ ಕೊಡುವಂತೆ ಮಾಧವ ರಾವ್ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.