ಬೆಂಗಳೂರು: ಹಣಕ್ಕಾಗಿ ಮಾರಕಾಸ್ತ್ರಗಳಿಂದ ಸಾರ್ವಜನಿಕರ ಮೇಲೆ ಮಾರಾಣಾಂತಿಕ ಹಲ್ಲೆ, ಸುಲಿಗೆ, ದರೋಡೆ ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಯನ್ನು ಗೋವಿಂದಪುರ ಠಾಣಾ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ. ನಸ್ರುಲ್ಲಾ ಬಂಧಿತ ಆರೋಪಿ.
2014ರಿಂದ ಹಣಕ್ಕಾಗಿ ಮಾರಕಾಸ್ತ್ರಗಳಿಂದ ಸಾರ್ವಜನಿಕರ ಮೇಲೆ ಮಾರಾಣಾಂತಿಕ ಹಲ್ಲೆ, ಸುಲಿಗೆ, ದರೋಡೆ ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ, ತನ್ನ ಕೃತ್ಯದ ದೃಶ್ಯಗಳನ್ನು ತಾನೇ ವೈರಲ್ ಮಾಡಿಸಿ ಭಯ ಸೃಷ್ಟಿಸುತ್ತಿದ್ದ. ಗೋವಿಂದಪುರ, ಮಾದನಾಯಕನಹಳ್ಳಿ, ಬಿಡದಿ, ಹೆಚ್ಎಸ್ಆರ್ ಲೇಔಟ್, ಹೆಬ್ಬಾಳ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಸಂಪಿಗೆಹಳ್ಳಿ, ಹೆಣ್ಣೂರು, ಬೇಗೂರು, ಸದಾಶಿವ ನಗರ ಠಾಣೆಗಳಲ್ಲಿ ಆರೋಪಿಯ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.
ಆರೋಪಿಯ ವಿರುದ್ಧ ಅನೇಕ ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿದ್ದು ಆತ ಹಾಜರಾಗುತ್ತಿರಲಿಲ್ಲ. ಗೋವಿಂದಪುರ ಠಾಣೆಯಲ್ಲಿ ಆರೋಪಿಯ ವಿರುದ್ಧ ರೌಡಿಪಟ್ಟಿ ಸಹ ತೆರೆಯಲಾಗಿತ್ತು. ಆತನ ವಿರುದ್ಧ 10 ಜಾಮೀನು ರಹಿತ ವಾರೆಂಟ್ ಹಾಗೂ 1 ಪ್ರೋಕ್ಲಾಮೇಷನ್ಅನ್ನು ಸಹ ನ್ಯಾಯಲಯವು ಹೊರಡಿಸಿತ್ತು. ಒಂದು ವರ್ಷದಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು.
ಕರ್ನಾಟಕ ರಾಜ್ಯ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಇತರೆ ಕಡೆಗಳಲ್ಲಿ ಪತ್ತೆ ಕಾರ್ಯ ಕೈಗೊಂಡಿದ್ದ ವಿಶೇಷ ತಂಡ ಆರೋಪಿ ಮಹಾರಾಷ್ಟ್ರದ ಮುಂಬೈ ನಗರದಲ್ಲಿರುವುದನ್ನ ತಿಳಿದುಕೊಂಡು, ಅಲ್ಲಿಗೆ ತೆರಳಿ ಆತನನನ್ನು ಬಂಧಿಸಿದೆ. ಸದ್ಯ ಆರೋಪಿಯನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಇದನ್ನೂ ಓದಿ:ಎಕ್ಸ್ ಖಾತೆಗಳ ನಿರ್ಬಂಧ ಸಂಬಂಧದ ದಾಖಲೆಗಳನ್ನು ಅರ್ಜಿದಾರರಿಗೆ ನೀಡಲಾಗದು : ಕೇಂದ್ರ ಸರ್ಕಾರ