ಕರ್ನಾಟಕ

karnataka

ETV Bharat / state

ದೇಶದ ವಿವಿಧೆಡೆ ದಾಖಲಾಗಿದ್ದ 122 ಪ್ರಕರಣಗಳ ಹಿಂದಿನ ರೂವಾರಿಗಳ ಬಂಧನ - Online Fraud Case - ONLINE FRAUD CASE

ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ನಾನಾ ಆಮಿಷಗಳನ್ನೊಡ್ಡಿ ವಂಚಿಸುತ್ತಿದ್ದ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ವಶಪಡಿಸಿಕೊಂಡ ಸ್ವತ್ತು
ಆರೋಪಿಗಳಿಂದ ವಶಪಡಿಸಿಕೊಂಡ ಸ್ವತ್ತು (ETV Bharat)

By ETV Bharat Karnataka Team

Published : Sep 27, 2024, 1:31 PM IST

ಬೆಂಗಳೂರು: ಚೀನಾ ಮೂಲದ ವ್ಯಕ್ತಿಗಳ ಅಣತಿಯಂತೆ ಆನ್‌ಲೈನ್ ಜಾಬ್ ಟಾಸ್ಕ್, ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ನೀಡುವುದಾಗಿ ಹೇಳಿ ವಂಚಿಸುತ್ತಿದ್ದ 10 ಆರೋಪಿಗಳನ್ನು ಬೆಂಗಳೂರು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೈಯದ್ ಯಾಹ್ಯಾ, ಉಮರ್ ಫಾರೂಕ್, ಮೊಹಮ್ಮದ್ ಮಹೀನ್, ಮೊಹಮ್ಮದ್ ಮುಜಾಮಿಲ್, ತೇಜಸ್, ಚೇತನ್, ವಾಸೀಂ, ಸೈಯದ್ ಝೈದ್, ಸಾಹಿ ಅಬ್ಧುಲ್ ಅನನ್ ಹಾಗೂ ಓಂಪ್ರಕಾಶ್ ಬಂಧಿತರು. ಇವರ ವಿರುದ್ಧ ವಿವಿಧ ರಾಜ್ಯಗಳಲ್ಲಿ ವಂಚಿಸಿದ್ದ ಆರೋಪದಡಿ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ (NCRP)ನಲ್ಲಿ ಒಟ್ಟು 122 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ (ETV Bharat)

ವಂಚನೆ ಹೇಗೆ?:ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ವ್ಯಕ್ತಿಗಳನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, "ಮನೆಯಲ್ಲಿಯೇ ಕುಳಿತು ನಾವು ನೀಡುವ ಟಾಸ್ಕ್​​ಗಳನ್ನು ಆನ್‌ಲೈನ್‌ನಲ್ಲಿ ನೀವು ಪೂರ್ಣಗೊಳಿಸಿದರೆ ಹಣ ನೀಡುವುದಾಗಿ" ನಂಬಿಸುತ್ತಿದ್ದರು. ಒಪ್ಪಿಗೆ ಸೂಚಿಸುವವರನ್ನು ತಮ್ಮದೇ ಆದ ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿ, ಆರಂಭದಲ್ಲಿ "ನಾವು ಹೇಳುವ ಕೆಲ ಐಷಾರಾಮಿ ಹೋಟೆಲ್‌ಗಳಿಗೆ ರಿವ್ಯೂಗಳನ್ನು ನೀಡಬೇಕು. ಈ ರೀವ್ಯೂಗಳನ್ನು ನೀಡುವ ಸಮಯದಲ್ಲಿ ನೀವು 150-200 ರೂ. ಪಾವತಿಸಿ ರಿವ್ಯೂ ರಿಪೋರ್ಟ್‌ ನೀಡಿದರೆ ಲಾಭಾಂಶ ನೀಡುತ್ತೇವೆ" ಎನ್ನುತ್ತಿದ್ದರು. ಅದೇ ರೀತಿ ಆರಂಭದಲ್ಲಿ ಪ್ರತಿ ರಿವ್ಯೂಗೆ 400-500 ರೂಪಾಯಿ ಹಣವನ್ನ ಆನ್‌ಲೈನ್ ಮೂಲಕ ಪಾವತಿಸುತ್ತಿದ್ದರು. ಈ ರೀತಿ ಹಲವು ರಿವ್ಯೂ ರಿಪೋರ್ಟ್‌ಗಳನ್ನು ತರಿಸಿಕೊಂಡು ಹಣ ಪಾವತಿಸಿ ನಂಬಿಕೆ ಗಳಿಸಿಕೊಂಡ ಬಳಿಕ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್‌ನಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸುತ್ತಿದ್ದರು. ನಂಬಿದವರು ಹಣ ಹೂಡಿಕೆ ಮಾಡಿದ ಬಳಿಕ ಸಂಪರ್ಕಕ್ಕೆ ಸಿಗದೆ ವಂಚಿಸುತ್ತಿದ್ದರು. ಇದೇ ರೀತಿ ವ್ಯಕ್ತಿಯೊಬ್ಬರಿಗೆ 25.37 ಲಕ್ಷ ರೂ. ವಂಚಿಸಿದ್ದ ಆರೋಪಿಗಳ ವಿರುದ್ಧ ಉತ್ತರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂಧಿತ ಆರೋಪಿಗಳು (ETV Bharat)

ತನಿಖೆ ಕೈಗೊಂಡ ಪೊಲೀಸರು, ಹಣ ಸಂದಾಯವಾಗಿರುವ ಬ್ಯಾಂಕ್ ಖಾತೆಗಳ ವಿವರ ಹಾಗೂ ಆ ಖಾತೆಗಳಿಂದ ಬೆಂಗಳೂರಿನ ವಿವಿಧ ಎಟಿಎಂಗಳಲ್ಲಿ ವಿತ್ ಡ್ರಾ ಆಗಿರುವುದನ್ನು ಪತ್ತೆಹಚ್ಚಿದ್ದರು. ಅದರನ್ವಯ 7 ಜನ ಆರೋಪಿಗಳನ್ನು ಆರ್.ಟಿ.ನಗರದ ಬಳಿ ಬಂಧಿಸಿ ವಿಚಾರಣೆ ನಡೆಸಿದಾಗ, ಆರೋಪಿಗಳ ಪೈಕಿ ಇನ್ನೂ ಮೂವರು ಚೀನಾಗೆ ತೆರಳಿರುವುದು ಹಾಗೂ ಚೀನಾ ಮೂಲದ ವ್ಯಕ್ತಿಗಳ ಸೂಚನೆಯಂತೆ ವಂಚನೆಯಲ್ಲಿ ತೊಡಗಿರುವುದನ್ನು ಬಾಯ್ಬಿಟ್ಟಿದ್ದರು. ಸೆಪ್ಟೆಂಬರ್ 15ರಂದು ಚೀನಾದಿಂದ ಬಂದಿಳಿದ ಮೂವರೂ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಒಟ್ಟು 10 ಜನರನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಆರೋಪಿಗಳಿಂದ ವಶಪಡಿಸಿಕೊಂಡ ಸ್ವತ್ತು (ETV Bharat)

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 72 ಮೊಬೈಲ್ ಫೋನ್‌ಗಳು, 182 ಡೆಬಿಟ್ ಕಾರ್ಡ್‌ಗಳು, 2 ಲ್ಯಾಪ್ ಟಾಪ್‌ಗಳು, ವಿವಿಧ ಕಂಪನಿಯ 133 ಸಿಮ್ ಕಾರ್ಡ್‌ಗಳು, 127 ಬ್ಯಾಂಕ್ ಪಾಸ್ ಬುಕ್ಸ್ ಮತ್ತು 1.74 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ಮೂಲಕ ಆಂಧ್ರ ಪ್ರದೇಶ, ಅಸ್ಸಾಂ, ಚಂಡೀಗಡ, ಹರಿಯಾಣ, ಹಿಮಾಚಲ ಪ್ರದೇಶ, ಬಿಹಾರ, ಛತ್ತಿಸ್‌ಘಡ್, ದೆಹಲಿ, ಗುಜರಾತ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ,‌ ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧೆಡೆ ಒಟ್ಟು 122 ಪ್ರಕರಣಗಳು ದಾಖಲಾಗಿದ್ದವು. ಆರೋಪಿತರ ಬಳಿ ಸಿಕ್ಕ ಬ್ಯಾಂಕ್ ಪಾಸ್ ಬುಕ್ಸ್ ಆಧಾರದಲ್ಲಿ ಆಯಾ ಖಾತೆಗಳಲ್ಲಿದ್ದ ಒಟ್ಟು 7.34 ಲಕ್ಷ ರೂ ಫ್ರೀಜ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ವಶಪಡಿಸಿಕೊಂಡ ಸ್ವತ್ತು (ETV Bharat)

ABOUT THE AUTHOR

...view details