ಕರ್ನಾಟಕ

karnataka

ETV Bharat / state

ಅರ್ಕಾವತಿ ಲೇಔಟ್ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಆರೋಪ; ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು - COMPLAINT AGAINST CM

ಅರ್ಕಾವತಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರಿಗೆ ನಿವೇಶನದಾರರು ದೂರು ನೀಡಿದ್ದಾರೆ.

cm-siddaramaiah
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Oct 14, 2024, 5:36 PM IST

ಬೆಂಗಳೂರು: ಅರ್ಕಾವತಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ನಿವೇಶನದಾರರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅರ್ಕಾವತಿ ಲೇಔಟ್​ನಲ್ಲಿ ಸೈಟು ಹಂಚಿಕೆಯಾಗಿದ್ದ ಶಿವಲಿಂಗಪ್ಪ, ವೆಂಕಟಕೃಷ್ಣಪ್ಪ, ರಾಮಚಂದ್ರಯ್ಯ, ರಾಜಶೇಖರ್ ಎಂಬವರು ದೂರು ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಹಾಗೂ ಬಿಡಿಎ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಬಡಾವಣೆಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳು ಭೂಗಳ್ಳರ ಪಾಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಥಣಿಸಂದ್ರ, ಸಂಪಿಗೆಹಳ್ಳಿ, ಜಕ್ಕೂರು ಕೆ.ನಾರಾಯಣಪುರ ಹಾಗೂ 16 ಹಳ್ಳಿಗಳೂ ಸೇರಿ ಸುಮಾರು 800 ಎಕರೆ ಪ್ರದೇಶದಲ್ಲಿ ಬಿಡಿಎಯಿಂದ ಅರ್ಕಾವತಿ ಬಡಾವಣೆ ನಿರ್ಮಾಣವಾಗಿತ್ತು. 2004ರಲ್ಲಿ ನಿವೇಶನಕ್ಕಾಗಿ ಅರ್ಜಿ ಆಹ್ವಾನಿಸಿದ್ದ ಬಿಡಿಎಗೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 20 ಸಾವಿರ ಫಲಾನುಭವಿಗಳನ್ನು ಪರಿಗಣಿಸಲಾಗಿತ್ತು.

12 ಸಾವಿರ ನಿವೇಶನದಾರರಿಗೆ ಬಿಡಿಎ ನಿವೇಶನ ನೋಂದಣಿ ಹಾಗೂ ಕ್ರಯಪತ್ರ ಮಾಡಿಕೊಡಲಾಗಿತ್ತು. 2006ರಲ್ಲಿ ನೂರಾರು ಮಂದಿಗೆ‌ ಬಿಡಿಎಯಿಂದ ನಿವೇಶನ ಹಂಚಿಕೆಯಾಗಿತ್ತು. 30/40 ನಿವೇಶನಕ್ಕೆ ಎರಡೂವರೆ ಲಕ್ಷ, 40/60 ನಿವೇಶನಕ್ಕೆ ನಾಲ್ಕೂವರೆ ಲಕ್ಷ ಹಣ ಪಡೆದು ಹಂಚಿಕೆ ಮಾಡಿತ್ತು. ನೋಂದಣಿ ಪತ್ರ ಹಾಗೂ ಕ್ರಯಪತ್ರ ಪಡೆದ ನಿವೇಶನದಾರರು ಕನಿಷ್ಠ ಹತ್ತು ವರ್ಷ ನಿವೇಶನ ಮಾರಾಟ ಮಾಡುವಂತಿರರಲ್ಲ. 2014ರಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಅರ್ಕಾವತಿ ಲೇಔಟ್​ನಲ್ಲಿ ನೀಡಲಾಗಿದ್ದ ನಿವೇಶನ ಹಿಂಪಡೆದಿತ್ತು ಎಂದು ದೂರುದಾರರು ಆಕ್ಷೇಪಿಸಿದ್ದಾರೆ.

2006ರಿಂದ ನಿವೇಶನ ಸಂಬಂಧ ತೆರಿಗೆ ಪಾವತಿಸಲಾಗಿದೆ. 2014ರಿಂದ ಇದುವರೆಗೂ ನಿವೇಶನದಾರರು ಹಂಚಿಕೆಯಾಗಿ ರಿಜಿಸ್ಟರ್ ಆಗಿದ್ದ ಸೈಟ್ ಹಿಂಪಡೆಯಲಾಗಿದೆ. ಅಲ್ಲದೆ, ಮಾಲೀಕರಿಂದ ವಶಪಡಿಸಿಕೊಂಡ ಜಾಗವನ್ನು ಅವರಿಗೂ ಹಿಂದಿರುಗಿಸಿಲ್ಲ. ಹಂಚಿಕೆ ಮಾಡಿ ನೋಂದಣಿ ಮಾಡಿದ ತಮ್ಮ ನಿವೇಶನಗಳಲ್ಲಿ ಮನೆ ನಿರ್ಮಾಣಕ್ಕೆ ಅನುವು ಮಾಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅರ್ಕಾವತಿಯಲ್ಲಿ ಸೈಟಿಲ್ಲ ಕೆಂಪೇಗೌಡ ಲೇಔಟ್​ನಲ್ಲಿ ನೋಡೋಣ ಎಂದು ನಿರ್ಲಕ್ಷ್ಯದಿಂದ ಅಧಿಕಾರಿಗಳು ಉತ್ತರಿಸುತ್ತಾರೆ ಎಂದು ದೂರುದಾರರು ದೂರಿನಲ್ಲಿ ವಿವರಿಸಿದ್ದಾರೆ.

ಅರ್ಕಾವತಿ ಲೇಔಟ್​ನಲ್ಲಿ ಅಕ್ರಮ ಎಸಗಿರುವುದು ಕಂಡುಬಂದಿದ್ದು, ವಶಪಡಿಸಿಕೊಂಡಿರುವ ಜಾಗ ಭೂಗಳ್ಳರ ಪಾಲಾಗುತ್ತಿದೆ. ಇದರಿಂದ ಅಸಲಿ ಫಲಾನುಭವಿಗಳಾಗಿರುವ ನಿವೇಶನದಾರರಿಗೆ ತೊಂದರೆಯಾಗಿದೆ ಎಂದು ದೂರುದಾರರು ಹೇಳಿದ್ದಾರೆ.

ಇದನ್ನೂ ಓದಿ:'ನಿಮ್ಮ ಆಸ್ತಿಗಳ ಮೌಲ್ಯ ಹೆಚ್ಚು ಮಾಡುತ್ತೇನೆ, ಮಾರಬೇಡಿ': ಕನಕಪುರ ಜನರಿಗೆ ಡಿಸಿಎಂ ಡಿಕೆಶಿ ಮನವಿ - increase property value

ABOUT THE AUTHOR

...view details