ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ ರಾಯಚೂರು: ರಾಜ್ಯ ಚುನಾವಣಾ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್ ನೇತೃತ್ವದ ಬಿಜೆಪಿ ಸಂಘಟನಾತ್ಮಕ ಸಭೆಯಲ್ಲಿ ಗದ್ದಲ ಉಂಟಾಗಿ ಪಕ್ಷದ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಸಂಘಟನಾತ್ಮಕ ಸಭೆಯನ್ನು ಆಯೋಜಿಸಲಾಗಿತ್ತು. ಸಭೆ ನಡೆಯುತ್ತಿರುವಾಗ ಮಾಜಿ ಎಂಪಿ ಬಿ.ವಿ.ನಾಯಕ ಅವರಿಗೆ ಬಿಜೆಪಿ ಲೋಕಸಭಾ ಟಿಕೆಟ್ ಕೈ ತಪ್ಪಿರುವುದ್ದರಿಂದ ಅವರ ಬೆಂಬಲಿಗರು ಹಾಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗಿದರು. ಇದಕ್ಕೆ ರಾಜಾ ಅಮರೇಶ್ವರ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಬ್ಬರ ಬೆಂಬಲಿಗರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಈ ವಾಗ್ವಾದ ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಬಳಿಕ ಇಬ್ಬರು ಮುಖಂಡರು ತಮ್ಮ ತಮ್ಮ ಬೆಂಬಲಿಗರನ್ನು ಸಮಧಾನಗೊಳಿಸಿ ಸಭೆ ಮುಂದುವರೆಸಿದರು. ಆದರೆ ಅಸಮಾಧಾನಗೊಂಡ ಬೆಂಬಲಿಗರು ಹೊರ ನಡೆದು ಮತ್ತೆ ಸಭೆಗೆ ವಾಪಾಸ್ ಬರಲಿಲ್ಲ.
ಇನ್ನು ನಗರಕ್ಕೆ ಆಗಮಿಸಿದ್ದ ರಾಜ್ಯ ಚುನಾವಣೆ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರವಾಲ್ ಮೊದಲಿಗೆ ರಾಜಾ ಅಮರೇಶ್ವರ ನಾಯಕ ಮನೆಗೆ ಭೇಟಿ ನೀಡಿದರು. ಇದಾದ ನಂತರ ಟಿಕೆಟ್ ಕೈತಪ್ಪಿ ಅಸಮಧಾನಗೊಂಡಿದ್ದ ಮಾಜಿ ಸಂಸದ ಬಿ.ವಿ.ನಾಯಕ ಮನೆಗೆ ತೆರಳಿ, ಜಿಲ್ಲೆಯ ಮುಖಂಡರು ಸೇರಿದಂತೆ ಮಾತುಕತೆ ನಡೆಸಿದರು. ಬಳಿಕ ಖಾಸಗಿ ಕಲ್ಯಾಣ ಮಂಟಪದಲ್ಲಿನ ಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರಿಗೆ ಅಸಮಾಧಾನಗೊಂಡ ಬಿ.ವಿ.ನಾಯಕ ಹಾಗೂ ಜಿಲ್ಲೆಯ ಮುಖಂಡರು ಬಿ.ಫಾರಂ ನೀಡುವ ಮೂಲಕ ಬಂಡಾಯ ಶಮನದ ಸೂಚನೆ ನೀಡಿದರು.
ಬಿ.ವಿ. ನಾಯಕ ಹೇಳಿಕೆ:ಇದಕ್ಕೂ ಮುನ್ನ ನಿನ್ನೆ ಬೆಳಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ್ದ ಬಿ.ವಿ.ನಾಯಕ ಅವರು, "ಡಾ.ರಾಧಾ ಮೋಹನ್ ದಾಸ್ ಅಗರವಾಲ್ ಅವರು ಮನೆಗೆ ಬಂದು ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಪಕ್ಷದಲ್ಲಿ ನಿರ್ಣಯಗಳು ಆಗುತ್ತಿರುತ್ತದೆ. ಸ್ವಲ್ಪ ತಾಳ್ಮೆಯಿಂದ ತಾವು ಸಹಕರಿಸಬೇಕೆಂಬ ವಿಚಾರದಲ್ಲಿ, ಕಾದು ನೋಡುವ ವಿಚಾರದಲ್ಲಿ ಮತ್ತು ಪಕ್ಷದ ನಿರ್ಣಯಗಳನ್ನು ಪಾಲಿಸಬೇಕೆನ್ನುವ ವಿಚಾರದಲ್ಲಿ ನನಗೆ ಕೆಲವು ಸೂಚನೆಗಳನ್ನು ಕೊಟ್ಟಿದ್ದಾರೆ. ಕೆಲ ಸೂಕ್ಷ್ಮ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಖಂಡಿತವಾಗಿಯೂ ನಾವು ಪಕ್ಷದ ನಿಯಮವನ್ನು ದಾಟಿ ಯಾವುದೇ ಆತುರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ನಾನು ಅವರಿಗೆ ಭರವಸೆ ಕೊಟ್ಟಿದ್ದೇನೆ. ದೇಶದ, ಪಕ್ಷದ ಚುನಾವಣೆಗೆ ಸಹಕಾರ ಮಾಡುವುದಾಗಿ ಹೇಳಿದ್ದೇನೆ. ಮುಂದಿನ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ" ಎಂದಿದ್ದಾರೆ.
ಇದನ್ನೂ ಓದಿ:ಮೋದಿ ಹುಟ್ಟಿಸಿದ ಭ್ರಮೆಗಳೆಲ್ಲಾ ಬೆತ್ತಲಾಗಿವೆ, ನೀವಿನ್ನೂ ಮೋದಿ ಭ್ರಮೆಯಲ್ಲಿದ್ದೀರಾ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ - CM Siddaramaiah