ಬೆಂಗಳೂರು: "ಆರ್ಯ ವೈಶ್ಯ ನಿಗಮದ ಮೂಲಕ ಕಳೆದ ವರ್ಷ 2023-24ರಲ್ಲಿ 800 ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಸಣ್ಣ ಉದ್ಯಮಿಗಳಿಗೆ ಸಾಲ-ಸಹಾಯಧನ ನೀಡಲಾಗಿತ್ತು. ಈ ವರ್ಷವೂ ಸಹ ಈ ಎಲ್ಲಾ ಯೋಜನೆಗಳೂ ಮುಂದುವರೆಯಲಿದ್ದು, ಗುರುವಾರ ನಡೆದ ಸಭೆಯಲ್ಲಿ ಚರ್ಚಿಸಿ 2024-25ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ" ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
"ನಿಗಮದ ಸಹಾಯದ ಅಗತ್ಯವಿರುವ ಅರ್ಹ ಸಣ್ಣ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬೇಕು" ಎಂದು ಹೇಳಿದರು.
ಆರ್ಯ ವೈಶ್ಯ ನಿಗಮದ ವಿವಿಧ ಯೋಜನೆಗಳು:ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 1) ಸ್ವಯಂ-ಉದ್ಯೋಗ ನೇರಸಾಲ ಯೋಜನೆ, 2) ಬ್ಯಾಂಕ್‍ಗಳ ಸಹಯೋಗದೊಂದಿಗೆ ಆರ್ಯ ವೈಶ್ಯ ಆಹಾರ ವಾಹಿನಿ/ ವಾಹಿನಿ ಯೋಜನೆ ಮತ್ತು 3) ವಾಸವಿ ಜಲಶಕ್ತಿ ಯೋಜನೆಗಳಿಗೆ ಅರ್ಜಿಗಳನ್ನು ಜುಲೈ 12ರಿಂದ ಆನ್ಲೈನ್ ಮೂಲಕವೇ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31 ಆಗಿರುತ್ತದೆ. ಎಲ್ಲಾ ಯೋಜನೆಗಳ ಹೆಚ್ಚಿನ ಮಾಹಿತಿಗೆ ನಿಗಮದ ಸಹಾಯವಾಣಿ 9448451111 ಅನ್ನು ಸಂಪರ್ಕಿಸಬಹುದು.
ಸ್ವಯಂ-ಉದ್ಯೋಗ ನೇರಸಾಲ ಯೋಜನೆ: ಈ ವರ್ಷ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಯಂ-ಉದ್ಯೋಗ ನೇರಸಾಲ ಯೋಜನೆಯಡಿ 1 ಲಕ್ಷ ರೂ.ಗಳ ಸಾಲ-ಸಹಾಯಧನ ನೀಡಲಾಗುತ್ತಿದ್ದು, ಇದರಲ್ಲಿ 20,000 ರೂಗಳ ಸಹಾಯಧನವಿರುತ್ತದೆ. ಹಾಗೂ ಬಾಕಿ ಮೊತ್ತವನ್ನು ಶೇ.4ರ ಬಡ್ಡಿದರದಲ್ಲಿ ನೀಡಲಾಗುವುದು.
ಹಲವಾರು ವರ್ಷಗಳ ಬೇಡಿಕೆಯಂತೆ ಈ ಯೋಜನೆಯಲ್ಲಿ ವಯೋಮಿತಿಯನ್ನು 45 ವರ್ಷಗಳಿಂದ 55 ವರ್ಷಗಳಿಗೆ ಹೆಚ್ಚಿಸಲಾಗಿದೆ. ಈ ಬಾರಿ 2019-20 ಮತ್ತು 2020-21 ಸಾಲಿನ ಫಲಾನುಭವಿಗಳು ಪಡೆದ ಸಾಲವನ್ನು ನಿಗದಿತ ಕಾಲಮಿತಿಯೊಳಗೆ ಮರುಪಾವತಿಸಿದಲ್ಲಿ ಪುನಃ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಆರ್ಯ ವೈಶ್ಯ ವಾಹಿನಿ/ಆಹಾರ ವಾಹಿನಿ ಯೋಜನೆ: ಈ ಬಾರಿ ಆರ್ಯ ವೈಶ್ಯ ವಾಹಿನಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಲ್ಲಿ ಅಭ್ಯರ್ಥಿಯು ಯೆಲ್ಲೋ ಬೋರ್ಡ್ ಉಳ್ಳ ಆಟೋ, ಟ್ರಕ್, ಕಾರ್ ಇತ್ಯಾದಿಯನ್ನು ಖರೀದಿಸಬಹುದು. ಅರ್ಜಿದಾರರು ಯಾವುದಾದರೂ ಬ್ಯಾಂಕ್‍ನಲ್ಲಿ ಸಾಲ ಪಡೆಯಬಹುದು ಹಾಗೂ ನಿಗಮದಿಂದ 1 ಲಕ್ಷ ರೂವರೆಗೆ ಸಬ್ಸಿಡಿಯನ್ನು ನೀಡಲಾಗುವುದು. ಅರ್ಜಿದಾರರು ವಾಹನವನ್ನು Fabrication ಮಾಡಿಸಿ ಮೊಬೈಲ್ ಕ್ಯಾಂಟೀನ್ ಆಗಿ ಪರಿವರ್ತಿಸಿದ್ದಲ್ಲಿ ಹೆಚ್ಚುವರಿಯಾಗಿ 1 ಲಕ್ಷ ರೂ ಸಹಾಯಧನವನ್ನು ನೀಡಲಾಗುತ್ತದೆ.
ವಾಸವಿ ಜಲಶಕ್ತಿ ಯೋಜನೆ: ನಿಗಮದ ವತಿಯಿಂದ ಸಣ್ಣ ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ವಾಸವಿ ಜಲಶಕ್ತಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ರೈತರು ಕನಿಷ್ಠ 2 ರಿಂದ ಗರಿಷ್ಠ 15 ಎಕರೆ ಜಮೀನು ಹೊಂದಿರಬೇಕು ಹಾಗೂ ಈ ಬಾರಿ ವಯೋಮಿತಿಯನ್ನು 50 ರಿಂದ 55ರವರೆಗೆ ಹೆಚ್ಚಿಸಲಾಗಿದೆ. ಈ ಯೋಜನೆಯಲ್ಲಿ ಶೇ.4 ರಷ್ಟು ಬಡ್ಡಿದರದಲ್ಲಿ 2 ಲಕ್ಷ ರೂ ಸಾಲ ಹಾಗೂ ವಿದ್ಯುದ್ಧೀಕರಣಕ್ಕಾಗಿ 50,000 ರೂ ಸಹಾಯಧನವನ್ನು ನೀಡಲಾಗುವುದು.
ಇದನ್ನೂ ಓದಿ:ಹುಬ್ಬಳ್ಳಿ: ತೋಟಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ಅರ್ಜಿ ಆಹ್ವಾನ - Horticulture Department Schemes