ಕಲಬುರಗಿ:ಆಡಳಿತದಲ್ಲಿ ಪಾರದರ್ಶಕತೆ ತರಲು ಇ-ಆಫೀಸ್ ಅನುಷ್ಠಾನಗೊಸಲಾಗಿದೆ. ಫೆಬ್ರವರಿ 1 ರಿಂದ ಜಿಲ್ಲೆಯ ಎಲ್ಲ ತಹಶೀಲ್ದಾರ್ ಕಚೇರಿಯಲ್ಲಿ ಇ-ಕಚೇರಿ ಮೂಲಕ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಸ್ವೀಕೃತಿ ಸಂಖ್ಯೆ ನೀಡಬೇಕು. ಯಾವುದೇ ಕಾರಣಕ್ಕೂ ಭೌತಿಕ ಕಡತ ಪ್ರಕ್ರಿಯೆ ಇರಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಬುಧವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಫೆ.1 ರಿಂದ ಆವಕ ಸಿಬ್ಬಂದಿಗೆ ಸ್ಟ್ಯಾಂಪ್, ಸೀಲು ಸಹ ನೀಡಬಾರದು ಎಂದರು.
ಜಿಲ್ಲೆಯ ಶಹಾಬಾದ್, ಯಡ್ರಾಮಿ, ಕಾಳಗಿ ತಹಶೀಲ್ದಾರ್ ಕಚೇರಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇ-ಕಚೇರಿ ಅನುಷ್ಠಾನ ಮಾಡದಿರುವುದಕ್ಕೆ ಸಿಡಿಮಿಡಿಗೊಂಡ ಸಚಿವರು, ಪಾರದರ್ಶಕ, ಸಮಯ ಉಳಿತಾಯ, ಅಕೌಂಟಿಬಿಲಿಟಿ ಇರಲೆಂದೇ ನೂತನ ಸಾಫ್ಟವೇರ್ ಅಭಿವೃದ್ಧಿಪಡಿಸಲಾಗಿದೆ. ಹೊಸ ವ್ಯವಸ್ಥೆಗೆ ಹೊಂದಿಕೊಂಡು ಕೂಡಲೇ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ತಹಶೀಲ್ದಾರ್, ಕಂದಾಯ ಸಿಬ್ಬಂದಿಗೆ ತಾಕೀತು ಮಾಡಿದರು.
ಅನುಷ್ಠಾನ ಮಾಡದ ತಹಶೀಲ್ದಾರರಿಗೆ ನೋಟಿಸ್:ಯಡ್ರಾಮಿ ತಹಶೀಲ್ದಾರ್ ಕಚೇರಿಯಲ್ಲಿ ಕಳೆದ 6 ತಿಂಗಳಲ್ಲಿ ಕೇವಲ 42 ಕಡತ ಸೃಜಿಸಿದ್ದು, ಇ-ಆಫೀಸ್ ಸಮರ್ಪಕವಾಗಿ ಅನುಷ್ಠಾನ ಮಾಡದ ಕಾರಣ ತಹಶೀಲ್ದಾರರಿಗೆ ನೋಟಿಸ್ ನೀಡುವಂತೆ ಡಿ.ಸಿ.ಗೆ ನಿರ್ದೇಶನ ನೀಡಿದ್ರು. ಜನವರಿ ಅಂತ್ಯಕ್ಕೆ ಎಲ್ಲಾ ತಹಶೀಲ್ದಾರ್ ಕಚೇರಿಯಲ್ಲಿ ಇ-ಕಚೇರಿಯಲ್ಲಿ ಸೃಜಿಸಿದ ಕಡತ ಪರಿಶೀಲಿಸಬೇಕು. ಶೇ.75 ರಷ್ಟು ಅರ್ಜಿಗಳು ಇ-ಕಚೇರಿಯಲ್ಲಿ ಇನ್ ವಾರ್ಡ್ ಮಾಡದಿದ್ದಲ್ಲಿ ಅಂತಹವರಿಗೆ ನೋಟಿಸ್ ಜಾರಿಗೊಳಿಸಿ ಎಂದು ಸೂಚಿಸಿದರು.
ಕಡತ ವಿಲೇವಾರಿ ಪ್ರಕ್ರಿಯೆ: ಕೆಸ್ವಾನ್ ಸಂಪರ್ಕ ಇಲ್ಲ, ಸರ್ವರ್ ಇಲ್ಲ ಎಂಬ ಕುಂಟು ನೆಪ ಬೇಡ. ನಾನು ಅದೇ ಸರ್ವರ್ ಮೂಲಕವೇ ಕಡತ ವಿಲೇವಾರಿ ಮಾಡುತ್ತಿದ್ದೇನೆ. ಡಿ ಸಿ ಕಚೇರಿಯಿಂದ ಕಂದಾಯ ಆಯುಕ್ತರಿಗೆ ಕಡತ ಕಳುಹಿಸಿದ್ದಲ್ಲಿ 2-3 ದಿನದಲ್ಲಿ ಸೂಕ್ತ ಆದೇಶದ ಜೊತೆಗೆ ವಿಲೇವಾರಿ ಮಾಡಲಾಗುತ್ತಿದೆ. ಅಷ್ಟೊಂದು ತ್ವರಿತಗತಿಯಲ್ಲಿ ಸರ್ಕಾರದ ಮಟ್ಟದಲ್ಲಿ ಕಡತ ವಿಲೇವಾರಿ ಪ್ರಕ್ರಿಯೆ ನಡೆದಿದೆ. ಹಳೇ ಫೈಲ್ ಪದ್ಧತಿ ವಿಲೇವಾರಿಯಿಂದ ಹೊರಬನ್ನಿ. ತಂತ್ರಜ್ಞಾನ ಸಮರ್ಪಕವಾಗಿ ಬಳಸಬೇಕು ಎಂದು ಸಿಬ್ಬಂದಿಗೆ ನಿರ್ದೇಶನ ನೀಡಿದರು.