ಬೆಳಗಾವಿ: ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಮೇಲುಗೈ ಸಾಧಿಸಿದ್ದಾರೆ. ನಿರೀಕ್ಷೆಯನ್ನೇ ಮಾಡದ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಡಿಸಿಸಿ ಬ್ಯಾಂಕಿನಲ್ಲಿ ಕತ್ತಿ ಮನೆತನ ತೆರೆಮರೆಗೆ ಸರಿಯಿತು.
ಅಕ್ಟೋಬರ್ 5ರಂದು ರಮೇಶ ಕತ್ತಿ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಚುನಾವಣೆಗೂ ಮೊದಲು ಬೆಳಗಾವಿ ಖಾಸಗಿ ಹೋಟೆಲ್ನಲ್ಲಿ ನಿರ್ದೇಶಕರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ರಮೇಶ ಜಾರಕಿಹೊಳಿ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ನಡೆಯಿತು. ಈ ವೇಳೆ ರಾಯಬಾಗದ ಕ್ಷೇತ್ರದ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಅಪ್ಪಾಸಾಹೇಬ ಕುಲಗುಡೆ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಅಪ್ಪಾಸಾಹೇಬ ಅವರನ್ನು ನೂತನ ಅಧ್ಯಕ್ಷರಾಗಿ ಘೋಷಿಸಿದರು.
ಜಾರಕಿಹೊಳಿ ಸಹೋದರರು ನಡೆಸಿದ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್ ಕತ್ತಿ, ನಿರ್ದೇಶಕ ಲಕ್ಷ್ಮಣ ಸವದಿ ಗೈರು ಹಾಜರಾಗಿದ್ದರು. ಈ ಮೂಲಕ ಡಿಸಿಸಿ ಬ್ಯಾಂಕ್ ರಾಜಕಾರಣದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಅಲ್ಲದೇ ಡಿಸಿಸಿ ಬ್ಯಾಂಕಿಗೆ ಲಕ್ಷ್ಮಣ ಸವದಿ ಆಗಮಿಸಿ ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿದರು. ಆದರೆ, ರಮೇಶ್ ಕತ್ತಿ ಮಾತ್ರ ಇತ್ತ ಸುಳಿಯಲಿಲ್ಲ.
ಡಿಸಿಸಿ ಬ್ಯಾಂಕ್ ರಾಜಕಾರಣಕ್ಕೆ ಎಂದೂ ಕೈ ಹಾಕದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ಮಧ್ಯಪ್ರವೇಶ ಮಾಡಿ ನಿರೀಕ್ಷೆಗಳನ್ನೆಲ್ಲಾ ಹುಸಿ ಮಾಡಿದರು. ಬೆಳಗಿನವರೆಗೂ ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ದೊಡ್ಡಗೌಡರ, ಸುಭಾಷ ಢವಳೇಶ್ವರ, ಅರವಿಂದ ಪಾಟೀಲ ಈ ನಾಲ್ವರಲ್ಲಿ ಒಬ್ಬರು ಅಧ್ಯಕ್ಷರಾಗುತ್ತಾರೆ ಎಂಬ ಮಾತು ಕೇಳಿ ಬಂದಿದ್ದವು. ಆದರೆ, ಜಾರಕಿಹೊಳಿ ಸಹೋದರರ ರಣತಂತ್ರದಿಂದಾಗಿ ಅಚ್ಚರಿ ಅಭ್ಯರ್ಥಿ ಅಪ್ಪಾಸಾಹೇಬ ಕುಲಗುಡೆ ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ. ಈ ವೇಳೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ನಿರ್ದೇಶಕರಾದ ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ದೊಡ್ಡಗೌಡರ, ರತ್ನಾ ಮಾಮನಿ, ರಾಜೇಂದ್ರ ಅಂಕಲಗಿ ಸೇರಿ ಬಹುತೇಕ ನಿರ್ದೇಶಕರು ಹಾಜರಿದ್ದರು.
ಮಂತ್ರಿ ಸ್ಥಾನಕ್ಕೆ ಸಮ:ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ಅತಿ ದೊಡ್ಡದು ಎಂಬ ಹಿರಿಮೆ ಹೊಂದಿದೆ. ಈ ಬ್ಯಾಂಕ್ ಚುಕ್ಕಾಣಿ ಹಿಡಿಯುವವರು ಮಂತ್ರಿ ಸ್ಥಾನಕ್ಕೆ ಸಮನಾದ ಅಧಿಕಾರ ಹೊಂದಿರುತ್ತಾರೆ ಎಂಬುದು ಜಿಲ್ಲೆಯಲ್ಲಿ ಜನಜನಿತ. ಒಟ್ಟು 5,791 ಕೋಟಿ ರೂ. ಠೇವಣಿ, 5,200 ಕೋಟಿ ರೂ. ಸಾಲ ನೀಡಿರುವುದು ಈ ಬ್ಯಾಂಕಿನ ಸದ್ಯದ ದಾಖಲೆ. ಒಟ್ಟು 1,155 ಪಿಕೆಪಿಎಸ್‌ಗಳನ್ನು ಹೊಂದಿದ್ದು, ಜಿಲ್ಲೆಯ 40 ಲಕ್ಷಕ್ಕೂ ಹೆಚ್ಚು ರೈತರ ಆರ್ಥಿಕತೆ ಮೇಲೆ ಈ ಬ್ಯಾಂಕ್ ನೇರ ಪರಿಣಾಮ ಬೀರುತ್ತದೆ. ಇನ್ನು, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದರೆ ಮಂತ್ರಿ, ನಿರ್ದೇಶಕರಾದರೆ ಶಾಸಕರಷ್ಟು ವರ್ಚಸ್ಸು ಹೊಂದಿರುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ.
ರಮೇಶ್ ಕತ್ತಿ ಸೈಡ್ ಲೈನ್? ಬೆಳಗಾವಿ ಡಿಸಿಸಿ ಬ್ಯಾಂಕ್ ಎಂದರೆ ರಮೇಶ್ ಕತ್ತಿ, ರಮೇಶ್ ಕತ್ತಿ ಎಂದರೆ ಡಿಸಿಸಿ ಬ್ಯಾಂಕ್ ಎನ್ನುವ ಮಾತಿತ್ತು. 1986ರಲ್ಲಿ ಮೊದಲ ಬಾರಿಗೆ ನಿರ್ದೇಶಕರಾಗಿದ್ದ ಅವರು, 4 ಬಾರಿ ಉಪಾಧ್ಯಕ್ಷರಾಗಿ, 23 ವರ್ಷ ಅಧ್ಯಕ್ಷರಾಗಿ ಈವರೆಗೆ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಬ್ಯಾಂಕ್ನಲ್ಲಿ ಬಿಗಿಹಿಡಿತ ಹೊಂದಿದ್ದರು. ಯಾವಾಗ, ಅವರ ಸಹೋದರ ಉಮೇಶ್ ಕತ್ತಿ ನಿಧನರಾದರೋ? ಅಂದಿನಿಂದ ರಮೇಶ್ ಕತ್ತಿ ಜಿಲ್ಲೆಯಲ್ಲಿ ಏಕಾಂಗಿಯಾದರು. ಚಿಕ್ಕೋಡಿ ಲೋಕಸಭೆಗೆ ಬಿಜೆಪಿ ಟಿಕೆಟ್ ಸಿಗಲಿಲ್ಲ. ಈಗ ಅಧ್ಯಕ್ಷ ಸ್ಥಾನವೂ ಹೋಯಿತು. ಹಾಗಾಗಿ, ಡಿಸಿಸಿ ಬ್ಯಾಂಕ್ ಕತ್ತಿ ಮನೆತನದ ಪರ್ವ ಮುಗಿದಂತೆ ಆಯಿತು ಎಂದು ಜಿಲ್ಲೆಯ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ನೂತನ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಮಾತನಾಡಿ, ನಾನು ಕಳೆದ 18 ವರ್ಷಗಳಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೇನೆ. ಅಧ್ಯಕ್ಷನಾಗುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಜಾರಕಿಹೊಳಿ ಸಹೋದರರು ಪ್ರೀತಿ, ವಿಶ್ವಾಸ ಇಟ್ಟು ನನ್ನ ಹೆಸರನ್ನು ದಿಢೀರ್ ಅಂತಾ ಘೋಷಿಸಿದರು. ಹಾಗಾಗಿ, ಅಧ್ಯಕ್ಷನಾಗಿದ್ದೇನೆ. ರೈತರಿಗೆ ಹೆಚ್ಚು ಸಾಲ ವಿತರಿಸಲಾಗುವುದು ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ತಮ್ಮನ್ನು ಆಯ್ಕೆ ಮಾಡಲಾಯಿತು ಎಂಬ ಪ್ರಶ್ನೆಗೆ ಡಿಸಿಸಿ ಬ್ಯಾಂಕ್ನಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಂತಾ ಇಲ್ಲ. ಸಹಕಾರ ಕ್ಷೇತ್ರದಲ್ಲಿ ಇದಕ್ಕೆ ಅವಕಾಶ ಇಲ್ಲ. ಬರುವ ದಿನಗಳಲ್ಲಿ 18 ನಿರ್ದೇಶಕರು ಜೊತೆಗೆ ಚರ್ಚಿಸಿ ಉತ್ತಮ ಆಡಳಿತ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಹೊಸಬರಿಗೆ ಅವಕಾಶ ನೀಡಿದ್ದೇವೆ. ಭವಿಷ್ಯದ ದೃಷ್ಟಿಯಿಂದ ಅಳೆದು ತೂಗಿ ಸರ್ವಾನುಮತದಿಂದ ಅಪ್ಪಾಸಾಹೇಬ ಕುಲಗುಡೆ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅದೇ ರೀತಿ ಉಪಾಧ್ಯಕ್ಷರಾಗಿ ಸುಭಾಷ ಢವಳೇಶ್ವರ ಮುಂದುವರಿಯಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆ: ಸಂಜೆ 5ಗಂಟೆ ವೇಳೆಗೆ ಚನ್ನಪಟ್ಟಣದಲ್ಲಿ ಅತಿ ಹೆಚ್ಚು 84 ರಷ್ಟು ಮತದಾನ