ಕರ್ನಾಟಕ

karnataka

ETV Bharat / state

ಬೆಂಗಳೂರು: ಇಸ್ಕಾನ್​ನಲ್ಲಿ 39ನೇ ಶ್ರೀಕೃಷ್ಣ, ಬಲರಾಮರ ವಾರ್ಷಿಕ ರಥಯಾತ್ರೆ - ಮಧು ಪಂಡಿತ ದಾಸ

ಬೆಂಗಳೂರಿನ ಇಸ್ಕಾನ್‌ ದೇಗುಲದಲ್ಲಿ ಶನಿವಾರ ಶ್ರೀಕೃಷ್ಣ, ಬಲರಾಮರ ವಾರ್ಷಿಕ ರಥಯಾತ್ರೆ ವಿಜೃಂಭಣೆಯಿಂದ ನಡೆಯಿತು.

ಶ್ರೀಕೃಷ್ಣ, ಬಲರಾಮರ ವಾರ್ಷಿಕ ರಥಯಾತ್ರೆ
ಶ್ರೀಕೃಷ್ಣ, ಬಲರಾಮರ ವಾರ್ಷಿಕ ರಥಯಾತ್ರೆ

By ETV Bharat Karnataka Team

Published : Jan 28, 2024, 10:50 AM IST

Updated : Jan 28, 2024, 1:56 PM IST

39ನೇ ಶ್ರೀಕೃಷ್ಣ, ಬಲರಾಮರ ವಾರ್ಷಿಕ ರಥಯಾತ್ರೆ

ಬೆಂಗಳೂರು:ಇಸ್ಕಾನ್​ನಲ್ಲಿ ಶ್ರೀಕೃಷ್ಣ ಮತ್ತು ಬಲರಾಮರ ರಥಯಾತ್ರೆಯನ್ನು ಶನಿವಾರ ವಿಜೃಂಭಣೆಯಿಂದ ನಡೆಸಲಾಯಿತು. ರಥದ ಮೇಲೆ ಭಗವಂತನ ದರ್ಶನ ಪಡೆದ ಭಕ್ತರು ಅತ್ಯ೦ತ ಸ೦ತಸದಿಂದ ಉತ್ಸವದಲ್ಲಿ ಭಾಗಿಯಾದರು. ಇಸ್ಕಾನ್ 1985ರಿಂದ ರಥೋತ್ಸವ ಆಚರಿಸುತ್ತಿದ್ದು, ಇದು 39ನೇ ವಾರ್ಷಿಕ ರಥ ಯಾತ್ರೆಯಾಗಿದೆ.

ಮೆರವಣಿಗೆ ಇಸ್ಕಾನ್ ರಾಜಾಜಿನಗರದಿಂದ ಪ್ರಾರಂಭವಾಗಿ ಪ್ರಮುಖ ರಸ್ತೆಯ ಮೂಲಕ ಸಮೀಪದ ಸ್ಥಳಗಳಿಗೆ ತೆರಳಿ ದೇವಸ್ಥಾನಕ್ಕೆ ಮರಳಿತು. ಮೃದಂಗ ಮತ್ತು ಕರತಾಳಗಳ ಮಧುರ ದನಿಯನ್ನೊಳಗೊಂಡ ಭಕ್ತರ ಮನಮೋಹಕ ಕೀರ್ತನೆಗಳು ರಸ್ತೆಗಳಲ್ಲಿ ಪ್ರತಿಧ್ವನಿಸಿದವು. ರಾಜಾಜಿನಗರದ ಸ್ಥಳೀಯರು ತಮ್ಮ ಮನೆ, ಅಂಗಡಿಗಳ ಮುಂದಿನ ಬೀದಿಗಳನ್ನು ಶುಚಿಗೊಳಿಸಿ ಬಣ್ಣಬಣ್ಣದ ರಂಗೋಲಿಗಳಿಂದ ಅಲಂಕರಿಸಿ ದೇವರನ್ನು ಸ್ವಾಗತಿಸಿದರು. ರಥದ ಮೇಲೆ ಕುಳಿತಿದ್ದ ಶ್ರೀಕೃಷ್ಣ ಬಲರಾಮರಿಗೆ ಭಕ್ತರು ಹಣ್ಣು, ಹಂಪಲು, ಪುಷ್ಪ, ಸಿಹಿತಿಂಡಿ ಅರ್ಪಿಸಿದರು. ಮೆರವಣಿಗೆಯುದ್ದಕ್ಕೂ ಸಾವಿರಾರು ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

26 ಅಡಿ ಎತ್ತರ, ಸುಂದರವಾಗಿ ಅಲಂಕರಿಸಲ್ಪಟ್ಟ ರಥವು ಸಾಂಪ್ರದಾಯಿಕ ಮತ್ತು ಆಧುನಿಕ ಬ್ರೇಕ್‌ಗಳು, ಸ್ಟೀರಿಂಗ್ ವೀಲ್ ಮತ್ತು ಎಲೆಕ್ಟ್ರಿಕ್ ಮೋಟಾರು ಚಾಲಿತ ಮೇಲಾವರಣ ಹೊಂದಿತ್ತು. ರಥದ ಎರಡೂ ಬದಿಯಲ್ಲಿ 110 ಅಡಿ ಉದ್ದದ ಎರಡು ಹಗ್ಗಗಳನ್ನು ಜೋಡಿಸಲಾಗಿತ್ತು. ಜನರು ಆರಾಮವಾಗಿ ರಥ ಎಳೆಯಲು ಸಾಕಷ್ಟು ಸ್ಥಳಾವಕಾಶ ಕಲ್ಪಿಸಲಾಗಿತ್ತು. ಜನರ ಸುರಕ್ಷತೆಗಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ರಥ ಯಾತ್ರೆಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಸಚಿವ ಹಾಗೂ ಶಾಸಕ ಕೆ. ಗೋಪಾಲಯ್ಯ, ಚಂಚಲಪತಿ ದಾಸ್ ಸೇರಿದಂತೆ ಇತರರು ಪಾಲ್ಗೊಂಡಿದರು. ಬಳಿಕ ನಡೆದ ಕಾರ್ಯಕ್ರಮವನ್ನು ಚಲುವರಾಯಸ್ವಾಮಿ ಉದ್ಘಾಟಿಸಿ ಮಾತನಾಡಿದರು. "ಕೃಷ್ಣ ಪರಮಾತ್ಮನು ದೇವತೆಗಳನ್ನೂ ಸೇರಿದಂತೆ ಎಲ್ಲಾ ಭಕ್ತರ ಸಂಕಷ್ಟಗಳನ್ನು ನೀಗಿಸುವಂತಹ ದೇವಾದಿದೇವ ಪರಮಪುರುಷ. ಶ್ರೀರಾಮ ಮತ್ತು ಶ್ರೀಕೃಷ್ಣರ ಆದರ್ಶ ಮತ್ತು ಉಪದೇಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಮಧು ಪಂಡಿತ ದಾಸರು ಸೇರಿದಂತೆ ವಿದ್ಯಾವಂತ ಮತ್ತು ಪ್ರತಿಭಾವಂತ ಯುವಕರು ತಮ್ಮ ಲೌಕಿಕ ಭೋಗಗಳನ್ನೆಲ್ಲಾ ತೊರೆದು ಇಸ್ಕಾನ್ ಸಂಸ್ಥೆ ಸೇರಿ ದೇವರಿಗೆ ಹಾಗೂ ಸಮಾಜಕ್ಕೆ ನಿಸ್ವರ್ಥ ಸೇವೆ ಮಾಡುತ್ತಿರುವುದು ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಇವರ ಎಲ್ಲಾ ಸಮಾಜಮುಖಿ ಸೇವಾಕಾರ್ಯಗಳಲ್ಲಿ ವೈಯಕ್ತಿಕವಾಗಿ ಹಾಗೂ ಸರ್ಕಾರದ ವತಿಯಿಂದ ಸಹಕಾರ ಸದಾಕಾಲ ಇರುತ್ತದೆ" ಎಂದರು.

ಇಸ್ಕಾನ್ ಬೆಂಗಳೂರಿನ ಅಧ್ಯಕ್ಷ ಮಧು ಪಂಡಿತ ದಾಸರು ರಥಯಾತ್ರೆಯಲ್ಲಿ ಮಾತನಾಡಿ, "ಶ್ರೀಕೃಷ್ಣ, ಬಲರಾಮರು ತಮ್ಮ ಅಸೀಮ ಕೃಪೆ ನೀಡಲಿ ಎಂದು ದೇವಾಲಯದಾಚೆ ರಥಯಾತ್ರೆಯನ್ನು ವಾರ್ಷಿಕವಾಗಿ ಮಾಡಲಾಗುತ್ತಿದೆ. ಜನರು ತಮ್ಮ ಹೃದಯದಲ್ಲಿ ಭಗವಂತನನ್ನು ಆಹ್ವಾನಿಸಲು ಇದೊಂದು ವಿಶೇಷ ಅವಕಾಶ. ರಥದ ಮೇಲೆ ಭಗವಂತನ ದರ್ಶನ ಪಡೆದವರು ಅಪಾರ ಆಧ್ಯಾತ್ಮಿಕ ಲಾಭ ಪಡೆಯುತ್ತಾರೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ರಥಸ್ಥರಾದ ಶ್ರೀ ಕೃಷ್ಣ ಬಲರಾಮರು ನಮ್ಮೆಲ್ಲರಿಗೂ ಭಕ್ತಿ, ಶಾಂತಿ ಮತ್ತು ಸಂತೋಷ ದಯಪಾಲಿಸಲೆಂದು ಪ್ರಾರ್ಥಿಸುತ್ತೇವೆ" ಎಂದು ಆಶೀರ್ವಚನ ನೀಡಿದರು.

ಇದನ್ನೂ ಓದಿ:ಪುತ್ತಿಗೆ ಶ್ರೀಗೆ ಕೃಷ್ಣ ಪೂಜೆಯ ಅಧಿಕಾರ ಹಸ್ತಾಂತರಿಸಿದ ಅದಮಾರು ಶ್ರೀ

Last Updated : Jan 28, 2024, 1:56 PM IST

ABOUT THE AUTHOR

...view details