ಬಾಗಲಕೋಟೆ:ಜಮಖಂಡಿ ಪಟ್ಟಣದಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಗುರುವಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಪಿ.ಸಿ. ಗದ್ದಿಗೌಡರ ಪರ ರೋಡ್ ಶೋ ಮೂಲಕ ಮತ ಪ್ರಚಾರ ನಡೆಸಿದರು. ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅವರು, ಪಟ್ಟಣದಲ್ಲಿ ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮತಯಾಚಿಸಿದರು.
ರೋಡ್ ಶೋಗೂ ಮುನ್ನ ಹೆಲಿಪ್ಯಾಡ್ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅಣ್ಣಾಮಲೈ, ''ಕಾಂಗ್ರೆಸ್ ಪಕ್ಷದವರು ಸೋತಿದ್ದಾರೆ. ಸೋತವರು ಏನು ಬೇಕಾದರೂ ಮಾತನಾಡುತ್ತಾರೆ. ಕಾಂಗ್ರೆಸ್ ನಾಯಕರು ಹತಾಶೆಯಲ್ಲಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿಯಲ್ಲಿರಬೇಕೆಂದು ಮಾತಾಡುತ್ತಾರೆ. ನಾವು ಬಹಳ ಸ್ಪಷ್ಟವಾಗಿದ್ದೇವೆ. 10 ವರ್ಷ ಕೆಲಸ ಮಾಡಿದ್ದು, ಇನ್ನೂ 5 ವರ್ಷ ಮೋದಿಜಿ ಬೇಕು ಅಂತಾ ಜನರು ತೀರ್ಮಾನಿಸಿದ್ದಾರೆ. ಈ ಸಲ ಎನ್ಡಿಎಗೆ ಉತ್ಸಾಹದಿಂದ ಬೆಂಬಲ ನೀಡಿದ್ದಾರೆ'' ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣ ಇಟ್ಟುಕೊಂಡು ಬಿಜೆಪಿಗರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ''ಅಮಿತ್ ಶಾ ಅವರು ಈಗಾಗಲೇ ಇದಕ್ಕೆ ಉತ್ತರ ಕೊಟ್ಟಿದ್ದಾರೆ. ನಮ್ಮ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಎಸ್ಐಟಿ ಅದರ ಕಂಟ್ರೋಲ್‌ನಲ್ಲಿದೆ. ಅಗತ್ಯ ಕ್ರಮವನ್ನು ಕಾಂಗ್ರೆಸ್ ಸರ್ಕಾರ ತೆಗೆದುಕೊಳ್ಳಬೇಕಿದೆ. ಅದಕ್ಕೆ ಯಾರಾದರೂ ಅಡ್ಡಪಡಿಸುತ್ತಿದ್ದಾರಾ? ಕ್ರಮ ತಗೋಬೇಡಿ ಅಂತ ಯಾರಾದರೂ ಹೇಳುತ್ತಿದ್ದಾರಾ? ತೊಂದರೆ ಕೊಡ್ತಿದಾರಾ? ಎಲ್ಲಿಯೂ ಕೂಡಾ ನಾವು ಬರಲ್ಲ, ಸರ್ಕಾರ ನಿಮ್ಮದೇ ಇದೆ. ಪೊಲೀಸರು ನಿಮ್ಮವರೇ ಇದ್ದಾರೆ, ಕ್ರಮ ಕೈಗೊಳ್ಳಿ'' ಎಂದು ತಿರುಗೇಟು ನೀಡಿದರು.
ಇದು ಬಿಜೆಪಿಗೆ ಮುಜುಗರ ತಂದೊಡ್ಡುವುದಿಲ್ಲವೇ ಎಂಬ ಪ್ರಶ್ನೆಗೆ, ''ಎಲೆಕ್ಷನ್ ಸಮಯದಲ್ಲಿ ಬೇರೆ ರೂಪದಲ್ಲಿ ಜನರಿಗೆ ತೊಂದರೆ ಇದೆ ಅಂದರೆ ದೂರು ನೀಡುತ್ತಾರೆ. ಅಂತಹ ದೂರಿನ ತನಿಖೆ ಮಾಡಲು ಪೊಲೀಸ್ ಇಲಾಖೆ ಇದೆ. ಅವರು ಮಾಡುತ್ತಾರೆ. ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸರು ನಿರ್ಧರಿಸುತ್ತಾರೆ. ಈ ತನಿಖೆ ತಡೆಗೆ ಹಾಗೂ ಮುಚ್ಚಿಹಾಕಲು ಬಿಜೆಪಿ ಏನಾದರೂ ಮಾಡುತ್ತಿದೆಯೇ, ಇಲ್ವಲ್ಲ'' ಎಂದು ಪ್ರತಿಕ್ರಿಯಿಸಿದರು.