ಚಿಕ್ಕಮಗಳೂರು :ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಬಿಜೆಪಿಯಿಂದ ವಿನೂತನ ಪ್ರತಿಭಟನೆ ಮಾಡಲಾಗಿದೆ. ನಗರದ ಹನುಮಂತಪ್ಪ ವೃತ್ತದಲ್ಲಿ ಕಿವಿಗೆ ದಾಸವಾಳ ಮುಡಿದು, ಕೈಯಲ್ಲಿ ಚಿಪ್ಪು ಹಿಡಿದ ಬಿಜೆಪಿ ಕಾರ್ಯಕರ್ತರು, ಇದು ದಂಧೆ ಸರ್ಕಾರ, ಲೂಟಿ ಸರ್ಕಾರ, ಜನರಿಗೆ ಚಿಪ್ಪು ಕೊಟ್ಟ ಸರ್ಕಾರ ಎಂದು ಕಿಡಿಕಾರಿದರು.
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನ ಎಂ. ಬಿ ಪಾಟೀಲ್ ಸಮರ್ಥಿಸಿಕೊಂಡ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಪರಿಷತ್ ಸದಸ್ಯ ಸಿ. ಟಿ ರವಿ ಕಿಡಿಕಾರಿದ್ದು, ಕಾಂಗ್ರೆಸ್ ರಾಜ್ಯಕ್ಕೆ ವರವಾಗುವ ಬದಲು ಶಾಪವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಸೆಸ್ ಕಡಿಮೆ ಮಾಡಿದ್ದೆವು. ಈಗ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡಿದೆ ಎಂದರು ಹರಿಹಾಯ್ದರು.
''ಈಗಲೇ ಹೀಗಾದ್ರೆ ರಾಜ್ಯದ ಮುಂದಿನ ಗತಿ ಏನು? ಈಗ ರಾಜ್ಯದಲ್ಲಿ 4 ಜನ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಕಡೆ ಗುತ್ತಿಗೆದಾರರು ಸಾಯುತ್ತಿದ್ದಾರೆ. ಮತ್ತೊಂದು ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಬೆಲೆ ಏರಿಕೆಯ ಬರೆ, ರಾಜ್ಯದಲ್ಲಿ ಪ್ರೊಡಕ್ಷನ್ ಕಾಸ್ಟ್ ಜಾಸ್ತಿಯಾದ್ರೆ ಇಲ್ಲಿ ಇನ್ವೆಸ್ಟ್ ಮಾಡಲು ಯಾರೂ ಬರಲ್ಲ. ನಮ್ಮ ರಾಜ್ಯ ಸದ್ಯದಲ್ಲೇ ರೋಗಗ್ರಸ್ತ ರಾಜ್ಯವಾಗಲಿದೆ. ರಾಜ್ಯಕ್ಕೆ ಬರುವ ಉದ್ದಿಮೆಗಳೆಲ್ಲ ನೆರೆ ರಾಜ್ಯದ ಪಾಲಾಗುತ್ತಿವೆ'' ಎಂದು ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್ ವಿರುದ್ಧ ಸಿ ಟಿ ರವಿ ವಾಗ್ದಾಳಿ ನಡೆಸಿದರು.
''ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನೇ ನೀತಿ ಮಾಡ್ಕೊಂಡಿದೆ. ಮೂಗು ಹಿಡಿದ್ರೆ ಬಾಯಿ ಬಿಡ್ಬೇಕಾಗುತ್ತೆ ಅಂತಾರಲ್ಲ ಹಾಗೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾದ್ರೆ ಬೆಲೆ ಏರಿಕೆಗೆ ಲೈಸನ್ಸ್ ಕೊಟ್ಟಂಗೆ. ಕಷ್ಟದಲ್ಲಿರೋ ಜನರಿಗೆ ಸರ್ಕಾರ ಬೆಲೆ ಏರಿಕೆ ಬರೆ ಹಾಕಿದೆ. ಜನ ವಿರೋಧಿ ಸರ್ಕಾರ ಅನ್ನೋಕೆ ಮತ್ಯಾವ ಸರ್ಟಿಫಿಕೆಟ್ ಅಗತ್ಯ ಇಲ್ಲ. ಮೋದಿ ಪೆಟ್ರೋಲ್ ರೇಟ್ ಜಾಸ್ತಿ ಮಾಡಿದಾಗ ಸಿಎಂ ಶವದ ಅಣುಕು ಪ್ರದರ್ಶನ ಮಾಡಿದ್ರು. ಈಗ ಯಾರನ್ನ ಹೊತ್ಕಂಡ್ ಹೋಗಬೇಕು, ನಿಮ್ಮ ಸರ್ಕಾರವನ್ನೇ ಹೊತ್ಕಂಡ್ ಹೋಗಬೇಕು. ಇದು ಜನವಿರೋಧಿ ಸರ್ಕಾರ, ಸತ್ತು ಹೋಗಿರೋ ಸರ್ಕಾರ, ಜನರೇ ಈ ಸರ್ಕಾರವನ್ನ ದಫನ್ ಮಾಡೋ ದಿನ ಬರುತ್ತೆ. ಚುನಾವಣೆ ಸೋಲಿನ ಬಳಿಕ ಸರ್ಕಾರ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ರಾಜಕೀಯ ಪಕ್ಷ, ನಾಯಕರ ಮೇಲೆ ಸೇಡು ಆಯ್ತು, ಈಗ ಜನಸಾಮಾನ್ಯರ ಮೇಲೆ. ಕೂಡಲೇ ಬೆಲೆ ಏರಿಕೆ ಆದೇಶವನ್ನ ಹಿಂಪಡೆಯಬೇಕು. ನೀವು ಮಾಡಿರೋದು ಬೆಲೆ ಏರಿಕೆ, ಲೂಟಿ ಎರಡೇ. ಬೇರೇನೂ ಮಾಡಿದ್ದೀರಾ?. ಓಲೈಕೆ ರಾಜಕಾರಣಕ್ಕೆ ಗ್ಯಾರಂಟಿ ಆಸೆ ತೋರಿಸಿದ್ರಿ. ಅದು ಧಕ್ಕದಿದ್ದಾಗ ಬೆಲೆ ಏರಿಕೆ ಮಾಡಿದ್ದೀರಿ'' ಎಂದು ಪ್ರಶ್ನಿಸಿದರು.