ಚಾಮರಾಜನಗರ/ಕೊಯಿಕ್ಕೋಡ್: ಬಂಡೀಪುರದ ಮೂಲೆಹೊಳೆ ಅರಣ್ಯದಿಂದ ಆಹಾರ ಅರಸಿ ಕೇರಳದತ್ತ ತೆರಳಿ ಮಾನಂತವಾಡಿಯಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಸಾವನ್ನಪ್ಪಿದೆ. ಆನೆ ಸಾವಿನ ಬಗ್ಗೆ ಪರಿಸರ ಪ್ರೇಮಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೇರಳದ ಮಾನಂತವಾಡಿಗೆ ಕಾಡಾನೆ ನುಗ್ಗಿದ್ದರಿಂದ ಜನರು ಆತಂಕಗೊಂಡಿದ್ದರು. ಬಳಿಕ ಕರ್ನಾಟಕ ಮತ್ತು ಕೇರಳ ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕಾಡಾನೆಗೆ ಅರವಳಿಕೆ ಮದ್ದು ನೀಡಿದ್ದರು. ಆ ಬಳಿಕ ಆನೆಯನ್ನು ಸೆರೆ ಹಿಡಿದು ಬಂಡೀಪುರದ ರಾಂಪುರ ಆನೆ ಶಿಬಿರಕ್ಕೆ ಶನಿವಾರ ನಸುಕಿನ ಜಾವ ಕರೆತರಲಾಗಿತ್ತು. ನಂತರ ಕಾಡಾನೆ ಸಾವನ್ನಪ್ಪಿದೆ.
ಇನ್ನು ಕಾಡಾನೆ ಸಾವಿನ ಬೆನ್ನಲ್ಲೇ ಉನ್ನತ ಮಟ್ಟದ ಸಮಿತಿಯಿಮದ ತನಿಖೆ ನಡೆಸುವುದಾಗಿ ಕೇರಳ ಅರಣ್ಯ ಸಚಿವ ಎ ಕೆ ಶಶೀಂದ್ರನ್ ಹೇಳಿದ್ದಾರೆ. ತಜ್ಞರು ಪರೀಕ್ಷೆ ಮಾಡುವ ಮುನ್ನವೇ ಆನೆ ಕುಸಿದು ಬಿದ್ದಿದೆ. ಕೇರಳ ಮತ್ತು ಕರ್ನಾಟಕ ಜಂಟಿಯಾಗಿ ಮರಣೋತ್ತರ ಪರೀಕ್ಷೆ ನಡೆಸಲಿವೆ. ಅರಣ್ಯ ಇಲಾಖೆಯಲ್ಲಿ ಯಾವುದೇ ಲೋಪವಾಗಿಲ್ಲ. ಮರಣೋತ್ತರ ಪರೀಕ್ಷೆಯ ನಂತರವೇ ಆನೆ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಕೇರಳ ಸಚಿವರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಹಾಸನದ ಬೇಲೂರು ಸಮೀಪ ಸೆರೆ ಹಿಡಿದು ಬಂಡೀಪುರದ ಮೂಲೆಹೊಳೆ ಅರಣ್ಯಕ್ಕೆ ಆನೆಯನ್ನು ಕರೆತಂದು ರೇಡಿಯೋ ಕಾಲರ್ ಅಳವಡಿಸಿ ಬಿಡಲಾಗಿತ್ತು. ಆದರೆ, ಅದು ಆಹಾರ ಅರಸಿಕೊಂಡು ಕೇರಳದತ್ತ ಮುಖ ಮಾಡಿ ವೈನಾಡು ಭಾಗದಲ್ಲಿ ಓಡಾಡಿಕೊಂಡಿತ್ತು.